ಚಿಲ್ಲರೆ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ: ಪಿ.ರವಿಕುಮಾರ್

KannadaprabhaNewsNetwork |  
Published : Nov 16, 2026, 01:30 AM IST
ಪಿ.ರವಿಕುಮಾರ್‌ | Kannada Prabha

ಸಾರಾಂಶ

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಎಚ್‌ಡಿಕೆ ಕಾರ್ಯಕ್ರಮ ರದ್ದಾಗಿರುವುದರ ಹಿಂದೆ ಶಾಸಕರ ಕೈವಾಡವಿರುವ ಕುರಿತಾದ ಆರೋಪವನ್ನು ತಳ್ಳಿಹಾಕಿದ ಅವರು, ನಾನೇಕೆ ಎಚ್‌ಡಿಕೆ ಕಾರ್ಯಕ್ರಮ ರದ್ದುಪಡಿಸಲಿ. ಕುಮಾರಸ್ವಾಮಿಯವರ ಕಾರ್ಯಕ್ರಮ ನಿಗದಿಯಾಗಿರುವುದೇ ನನಗೆ ಗೊತ್ತಿಲ್ಲ. ಅವರ ಪ್ರವಾಸದ ಮಾಹಿತಿಯೂ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ದ್ವೇಷದ ರಾಜಕಾರಣ, ಚಿಲ್ಲರೆ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಆ ಕೆಲಸದಲ್ಲಿ ನಾನು ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಈ ಮಧ್ಯೆ ಜೆಡಿಎಸ್ ಸೋಷಿಯಲ್ ಮೀಡಿಯಾದವರು ಪ್ರಚಾರದ ಹುಚ್ಚಿಗೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಕಿಡಿಕಾರಿದರು.

ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಎಚ್‌ಡಿಕೆ ಕಾರ್ಯಕ್ರಮ ರದ್ದಾಗಿರುವುದರ ಹಿಂದೆ ಶಾಸಕರ ಕೈವಾಡವಿರುವ ಕುರಿತಾದ ಆರೋಪವನ್ನು ತಳ್ಳಿಹಾಕಿದ ಅವರು, ನಾನೇಕೆ ಎಚ್‌ಡಿಕೆ ಕಾರ್ಯಕ್ರಮ ರದ್ದುಪಡಿಸಲಿ. ಕುಮಾರಸ್ವಾಮಿಯವರ ಕಾರ್ಯಕ್ರಮ ನಿಗದಿಯಾಗಿರುವುದೇ ನನಗೆ ಗೊತ್ತಿಲ್ಲ. ಅವರ ಪ್ರವಾಸದ ಮಾಹಿತಿಯೂ ಇಲ್ಲ. ಅವರು ಕಾಲೇಜಿನ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ಕೊಡುವುದಕ್ಕೆ ಬಂದರೆ ಅದನ್ನು ಅಡ್ಡಿಪಡಿಸುವುದರಿಂದ ನನಗೇನು ಪ್ರಯೋಜನ ಎಂದು ‘ಕನ್ನಡಪ್ರಭ’ ಪತ್ರಿಕೆಯೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

ಇದೆಲ್ಲವೂ ಜೆಡಿಎಸ್‌ನವರ ಗಿಮಿಕ್ ರಾಜಕಾರಣ. ಅಭಿವೃದ್ಧಿ ಮಾಡಲಾಗದವರು ಇಂತಹ ಗಿಮಿಕ್‌ಗಳನ್ನು ಮಾಡುತ್ತಾ, ಅವರಿವರ ಮೇಲೆ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಜೆಡಿಎಸ್ ಸೋಷಿಯಲ್ ಮೀಡಿಯಾ ವಿಭಾಗದ ರಾಜ್ಯಾಧ್ಯಕ್ಷ ಚಂದನ್ ಸುಳ್ಳು ಆರೋಪ ಮಾಡುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನನ್ನ ಕ್ಷೇತ್ರದಲ್ಲಿ ನೂರಾರು ಕೋಟಿ ರು. ಕೆಲಸ ನಡೆಯುತ್ತಿದೆ. ರಸ್ತೆ, ಚರಂಡಿ, ನಾಲೆಗಳ ಆಧುನೀಕರಣ, ನೀರಾವರಿ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಪಥದಲ್ಲಿವೆ. ನಿಗದಿತ ಅವಧಿಯೊಳಗೆ ಅವುಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ನಾನು ನಿರತನಾಗಿದ್ದೇನೆ. ಈ ನಡುವೆ ಯಾರು ಎಲ್ಲಿಗೆ ಬರುತ್ತಾರೆ. ಏನು ಮಾಡುತ್ತಾರೆಂದು ನೋಡುತ್ತಾ ಕೂರುವುದಕ್ಕೆ ನನಗೆ ಸಮಯವಿಲ್ಲ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ಸಹಿಸದೆ ಜೆಡಿಎಸ್‌ನವರು ವಿನಾಕಾರಣ ನನ್ನ ಹೆಸರನ್ನು ಎಳೆದುತಂದಿದ್ದಾರೆ ಎಂದು ದೂಷಿಸಿದರು.

ನಾನೂ ಸಹ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದೆ. ಆಗ ಅವರು ಕೆಲವು ದಿನಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿಯವರ ಆಪ್ತ ಸಹಾಯಕರು ದೂರವಾಣಿ ಕರೆ ಮಾಡಿದ್ದರು. ಕೇಂದ್ರ ಸಚಿವರನ್ನು ಕಾಲೇಜಿನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದರು. ಶಿಷ್ಟಾಚಾರದ ಪ್ರಕಾರ ಅವರನ್ನು ಆಹ್ವಾನಿಸುತ್ತಿದ್ದೇವೆ. ಆದರೆ, ಯಾವುದೇ ಕಾರ್ಯಕ್ರಮಗಳಿಗೂ ಬರುತ್ತಿಲ್ಲವೆಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ಕಾರ್ಯಕ್ರಮ ಆಯೋಜನೆಗೊಂಡಿರುವ ವಿಷಯ ನನಗೆ ಗೊತ್ತಿಲ್ಲದಿದ್ದರೂ ನಾನು ಕಾರ್ಯಕ್ರಮ ರದ್ದುಪಡಿಸಿರುವುದಾಗಿ ಆರೋಪಿಸಿರುವುದು ಎಷ್ಟರಮಟ್ಟಿಗೆ ಸರಿ. ಇದು ಕುಚೋದ್ಯದ ರಾಜಕಾರಣವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಕೇಂದ್ರ ಸಚಿವರು, ಈ ಜಿಲ್ಲೆಯ ಸಂಸದರು. ಅವರ ಕಾರ್ಯಕ್ರಮ ರದ್ದುಪಡಿಸುವುದು, ಅವರ ಕಾರ್ಯಚಟವಟಿಕೆಗಳಿಗೆ ನಾನೇಕೆ ಅಡ್ಡಗಾಲಾಗಲಿ. ಈಗಾಗಲೇ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ೧೦೦ ಎಕರೆ ಭೂಮಿಯನ್ನು ನನ್ನ ಕ್ಷೇತ್ರದಲ್ಲೇ ಗುರುತಿಸಿ ನೀಡಿದ್ದೇನೆ. ಹೆಚ್ಚುವರಿ ಜಮೀನನ್ನೂ ದೊರಕಿಸಿಕೊಡುವುದಾಗಿಯೂ ಹೇಳಿದ್ದೇನೆ. ಹೀಗಿರುವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ನೀರಿನ ಬಾಟಲ್ ಕೊಡಲು ಬರುವ ಕೇಂದ್ರ ಸಚಿವರ ಕಾರ್ಯಕ್ರಮವನ್ನು ರದ್ದುಪಡಿಸುವಷ್ಟು ಕೆಳಮಟ್ಟದ ರಾಜಕಾರಣ ಮಾಡುವವನು ನಾನಲ್ಲ ಎಂದರು.

ಜೆಡಿಎಸ್‌ನ ಸೋಷಿಯಲ್ ಮೀಡಿಯಾದವರು ಇಂತಹ ಚಿಲ್ಲರೆ, ಪುಕ್ಕಟೆ ಪ್ರಚಾರಕ್ಕಾಗಿ ನನ್ನ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ಅಭಿವೃದ್ಧಿ ವಿಚಾರವಾಗಿ ನೇರಾನೇರ ಚರ್ಚೆಗೆ ಬರಲಿ. ಮೂರು ವರ್ಷಗಳಲ್ಲಿ ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಹಿತ ತೆರೆದಿಡುತ್ತೇನೆ. ಅವರು ಕೇಂದ್ರಸಚಿವರು ನೀಡಿರುವ ಕೊಡುಗೆಯನ್ನೂ ಜನರ ಮುಂದೆ ತೆರೆದಿಡಲಿ. ಸುಳ್ಳು ಆರೋಪಗಳಿಂದ ನನ್ನ ವರ್ಚಸ್ಸನ್ನು ಕುಗ್ಗಿಸಲು ಬಯಸಿದರೆ ಅದು ನಿಮ್ಮ ಮೂರ್ಖತನ. ಜನರಿಗೂ ನಿಮ್ಮ ದುಷ್ಟಬುದ್ದಿ ಅರ್ಥವಾಗಿದೆ. ಇಂತಹ ಸುಳ್ಳು ಆರೋಪಗಳಿಗೆ ಕಿವಿಗೊಡುವವರಲ್ಲ. ಅಭಿವೃದ್ಧಿ ಕೆಲಸ ಮಾಡುವವರನ್ನು ಅವರು ಬೆಂಬಲಿಸುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ