ನಿಖಿಲ್‌ ದೇಗುಲ ಪ್ರವೇಶಕ್ಕೆ ನಿರಾಕರಣೆ ಖಂಡನೀಯ: ಡಾ.ಕೆ.ಅನ್ನದಾನಿ

KannadaprabhaNewsNetwork |  
Published : Nov 16, 2026, 01:30 AM IST
ಡಾ.ಕೆ.ಅನ್ನದಾನಿ | Kannada Prabha

ಸಾರಾಂಶ

ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಡಿರುವ ಅಪಮಾನ ಇಡೀ ಸಮಾಜ ತಲೆತಗ್ಗಿಸುವಂತಹದ್ದು. ಇಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳದಿರುವುದು ಏಕೆ.

ಕನ್ನಡಪ್ರಭ ವಾರ್ತೆ ಹಲಗೂರು

ರಾಮನಗರ ಜಿಲ್ಲೆ ಕುರುಬರದೊಡ್ಡಿಯ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಿರುವುದನ್ನು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತೀವ್ರವಾಗಿ ಖಂಡಿಸಿದರು.

ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಸಾರ್ವಜನಿಕರ ದೇಣಿಗೆಯಿಂದ ನಿರ್ಮಿಸಿರುವ ಶ್ರೀಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ನಡೆದಿರುವ ಕೃತ್ಯ ಘೋರ ಅಪರಾಧವಾಗಿದೆ. ಈ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ಕಾನೂನು ವ್ಯಾಪ್ತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಅಗತ್ಯವಿದ್ದರೆ ಗಡಿಪಾರು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾಡಿರುವ ಅಪಮಾನ ಇಡೀ ಸಮಾಜ ತಲೆತಗ್ಗಿಸುವಂತಹದ್ದು. ಇಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳದಿರುವುದು ಏಕೆ ಎಂದು ಪ್ರಶ್ನಿಸಿದರು.

ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ವಿಚಾರ ಪ್ರಸ್ತಾಪಿಸಿದ ಅವರು, ಸಂಸದರಿಗೆ ನಿಗದಿಪಡಿಸಿದ ಕಾರ್ಯಕ್ರಮವನ್ನು ರದ್ದುಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಸರ್ಕಾರದ ದ್ವಂದ್ವ ನೀತಿಯನ್ನು ಟೀಕಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ವಿಡಿಯೋ ಹಂಚಿಕೊಂಡವರನ್ನು ಮಾತ್ರ ಹುಡುಕುತ್ತಿರುವುದು ಸರಿಯಲ್ಲ. ಗೃಹ ಸಚಿವರು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮಾಡುತ್ತಿರುವ ಟೀಕೆಗಳನ್ನು ಖಂಡಿಸಿದ ಅವರು, ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ, ದಲಿತರ ಕಲ್ಯಾಣ ಹಾಗೂ ಮಹಿಳೆಯರು, ಅಂಗವಿಕಲರು ಮತ್ತು ಬಡವರ ಪರವಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಜನಪರ ಕಾರ್ಯಗಳನ್ನು ಟೀಕಿಸುವ ಬದಲು ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ಸಚಿವರು ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.

ಗೃಹ ಸಚಿವ ಖಾತೆ ಬಹಳ ಘನತೆಯುಳ್ಳದ್ದು. ಅದಕ್ಕೆ ಗೌರವ ಬರುವಂತೆ ಪ್ರಿಯಾಂಕ್‌ ನಡೆದುಕೊಳ್ಳುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಶಿಫಾರಸ್ಸಿನಿಂದ ಪ್ರಿಯಾಂಕ್‌ಗೆ ಗೃಹ ಸಚಿವ ಖಾತೆ ಸಿಕ್ಕಿದೆ. ಸ್ಟಿಂಗ್‌ ಆಪರೇಷನ್‌ ಪ್ರಕರಣದಲ್ಲಿ ಪ್ರಿಯಾಂಕ್‌ ಕೇವಲ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ವಿನಃ ನಿಜವಾದ ಆರೋಪಿಗಳು ಯಾರೆಂದು ಗೊತ್ತಿದ್ದರೂ ಕ್ರಮ ಕೈಗೊಳ್ಳುವ ಧೈರ್ಯ, ತಾಕತ್ತನ್ನು ಪ್ರದರ್ಶಿಸುತ್ತಿಲ್ಲ ಎಂದು ನೇರವಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ