ಸಹಕಾರ ಸಂಘಗಳು ರೈತರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಾ, ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ಮುಕ್ತಗೊಳಿಸುವ ಜೊತೆಗೆ ಕಡಿಮೆ ಬಡ್ಡಿ ದರದ ಸಾಲ, ಕೃಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿ ಕ್ಷೇತ್ರದ ಬೆನ್ನೆಲುಬಾಗಿ ನಿಂತಿವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಶ್ಲಾಘಿಸಿದ್ದಾರೆ.
- ನ್ಯಾಮತಿ ತಾಲೂಕು ಸುರಹೊನ್ನೆಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಹಕಾರ ಸಂಘಗಳು ರೈತರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತಾ, ಮಧ್ಯವರ್ತಿಗಳ ಶೋಷಣೆಯಿಂದ ರೈತರನ್ನು ಮುಕ್ತಗೊಳಿಸುವ ಜೊತೆಗೆ ಕಡಿಮೆ ಬಡ್ಡಿ ದರದ ಸಾಲ, ಕೃಷಿ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿ ಕ್ಷೇತ್ರದ ಬೆನ್ನೆಲುಬಾಗಿ ನಿಂತಿವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಶ್ಲಾಘಿಸಿದರು.
ನ್ಯಾಮತಿ ತಾ. ಸುರಹೊನ್ನೆಯಲ್ಲಿ ಭಾನುವಾರ 73ನೇ ಅಖಿಲ ಭಾರತ ಸಹಕಾರ ಸಪ್ತಾಹ–2026 ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸುಲಭವಾಗಿ ಬೆಳೆ ಸಾಲ ಸಿಗುತ್ತಿದೆ. ಸರ್ಕಾರದ ಯೋಜನೆಗಳಡಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಸಾಲ ನೀಡಲಾಗುತ್ತಿದೆ. ಇದರಿಂದ ರೈತರು ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಬಹುದಾಗಿದೆ ಎಂದರು.
ರೈತರು ಕೃಷಿ ಉತ್ಪನ್ನಗಳನ್ನು ಸಹಕಾರ ಮಾರುಕಟ್ಟೆ ಸಂಘಗಳ ಮೂಲಕ ನೇರವಾಗಿ ಮಾರಾಟ ಮಾಡಲು ಅವಕಾಶವಿದೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದ ಸಂದರ್ಭದಲ್ಲಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ವ್ಯವಸ್ಥೆ ಇದೆ. ಹೈನುಗಾರಿಕೆ, ಕುರಿ, ಕೋಳಿ ಹಾಗೂ ಜೇನು ಸಾಕಾಣಿಕೆಯಂತಹ ಉಪ ಕಸುಬುಗಳಿಗೆ ಸಾಲ ಮತ್ತು ತರಬೇತಿ ನೀಡುವ ಮೂಲಕ ರೈತರ ಆದಾಯ ಹೆಚ್ಚಳಕ್ಕೂ ಸಹಕಾರ ಸಂಘಗಳು ನೆರವಾಗುತ್ತಿವೆ ಎಂದು ಹೇಳಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಪೌರಕಾರ್ಮಿಕ ಕುಟುಂಬದ ಹಿನ್ನೆಲೆಯಿಂದ ಬಂದು, ಸ್ವತಃ ಹಲವಾರು ಕಷ್ಟ-ಸವಾಲುಗಳನ್ನೆದುರಿಸಿ ಸಮಾಜದಲ್ಲಿ ಗುರುತಿಸಿಕೊಂಡ ಬಸವಂತ ಸಾಧನೆ ಶ್ಲಾಘನೀಯ. ವಿಶೇಷವಾಗಿ ಕೋವಿಡ್ ಮಹಾಮಾರಿ ವೇಳೆ ತಮ್ಮ ಜೀವದ ಹಂಗು ತೊರೆದು ಜನರ ನೆರವಿಗೆ ಧಾವಿಸಿದ ಬಸವಂತಪ್ಪ ಸೇವಾ ಮನೋಭಾವವನ್ನು ಸ್ಮರಿಸಬೇಕು ಎಂದರು.
ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ.ಜೆ.ಆರ್.ಷಣ್ಮುಖಪ್ಪ ಸೇರಿದಂತೆ ಸಹಕಾರ ಕ್ಷೇತ್ರದ ಗಣ್ಯರು, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.
- - -
(ಬಾಕ್ಸ್)
* ಬಸವಾಪಟ್ಟಣದಲ್ಲಿ ಬೆಸ್ಕಾಂ ಶಾಖಾ ಕಚೇರಿಗೆ ಶಂಕುಸ್ಥಾಪನೆ
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭಾನುವಾರ ಬೆಳಗ್ಗೆಯಿಂದಲೇ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ, ಆಯಾ ಗ್ರಾಮಸ್ಥರು, ಸಾರ್ವಜನಿಕರ ಅಹವಾಲನ್ನು ಆಲಿಸಿ, ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲೇ ಕ್ರಮ ಕೈಗೊಂಡರು.ತಮ್ಮ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ವಿವಿಧ ಮೂಲ ಸೌಕರ್ಯ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಸಚಿವ ಬಸವಂತಪ್ಪ ಗಮನಕ್ಕೆ ತಂದರು. ಈ ಪೈಕಿ ತಕ್ಷಣ ಪರಿಹರಿಸಬಹುದಾದ ಕೆಲ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಸೂಚಿಸಿದರು. ಇನ್ನು ಕೆಲ ಸಮಸ್ಯೆಗಳನ್ನು ಪರಿಶೀಲಿಸಿ ಕಾಲಮಿತಿಯೊಳಗೆ ಪರಿಹರಿಸುವಂತೆ ತಾಕೀತು ಮಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಜನರೊಂದಿಗೆ ನೇರ ಸಂವಾದ ನಡೆಸಿದರು.
ಬಳಿಕ ಕ್ಷೇತ್ರದ ಬಸವಾಪಟ್ಟಣದ ಬೆಸ್ಕಾಂ ಕಾಲನಿಯಲ್ಲಿ ಬೆಸ್ಕಾಂನಿಂದ ₹90 ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕಾರ್ಯ ಮತ್ತು ಪಾಲನೆ ವಿಭಾಗದ ನೂತನ ಶಾಖಾ ಕಚೇರಿ ಕಟ್ಟಡಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ನೂತನ ಕಟ್ಟಡ ನಿರ್ಮಾಣದಿಂದ ಬೆಸ್ಕಾಂನ ಕಾರ್ಯ ನಿರ್ವಹಣೆ ಹಾಗೂ ನಿರ್ವಹಣಾ ಚಟುವಟಿಕೆಗೆ ಅನುಕೂಲವಾಗಲಿದೆ. ಸುತ್ತಲಿನ ಗ್ರಾಮಗಳ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದ ವಿದ್ಯುತ್ ಸೇವೆ ಮತ್ತಷ್ಟು ಸುಧಾರಿಸಲು ಇಂತಹ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನೆರವಾಗಲಿವೆ ಎಂದು ಸಚಿವರು ತಿಳಿಸಿದರು.
- - -
-15ಕೆಡಿವಿಜಿ4:
ಸುರಹೊನ್ನೆಯಲ್ಲಿ ಸಚಿವ ಕೆ.ಎಸ್.ಬಸವಂತಪ್ಪ ಸಹಕಾರ ಸಪ್ತಾಹ ಉದ್ಘಾಟಿಸಿದರು. ಶಾಸಕ ಡಿ.ಜಿ.ಶಾಂತನಗೌಡ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.