ರಾಮಕೃಷ್ಣ ದಾಸರಿ
ಇಲ್ಲಿನ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಾರ್ವಜನಿಕರಿಲ್ಲದೆ ಸೊರಗಿತ್ತು.
ಮೊದಲ ದಿನವಾಗಿದ್ದ ಶನಿವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭದ ನಂತರ ನಡೆದ ಗೋಷ್ಠಿಗಳಲ್ಲಿಯೂ ಜನಸಂಖ್ಯೆ ಕ್ಷೀಣಿಸಿತ್ತು. ಎರಡನೇ ದಿನ ಬೆಳಗ್ಗೆಯಿಂದ ಸಂಜೆವರೆಗೂ ನಡೆದಂತಹ ವಿವಿಧ ಗೋಷ್ಠಿಗಳು, ಉಪನ್ಯಾಸ, ಕವಿಗೋಷ್ಠಿಗಳಿಗೆ ಪ್ರೇಕ್ಷಕರ ಕೊರತೆ ಎದ್ದು ಕಂಡಿತು.ಸಮ್ಮೇಳನಕ್ಕಾಗಿ ಒಒಟಿ ಸೌಲಭ್ಯ ಪಡೆದಿದ್ದ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಶಿಕ್ಷಕರು ಶನಿವಾರ ಅಲ್ಲಲ್ಲಿ ದರ್ಶನಕೊಟ್ಟು ಹೋದವರು ಭಾನುವಾರ ರಂಗಮಂದಿರದ ಕಡೆ ಸುಳಿಯಲೇ ಇಲ್ಲ. ಭಾನುವಾರ ನಡೆದಂತಹ ವಿವಿಧ ಕಾರ್ಯಕ್ರಮಗಳಲ್ಲಿ ಜನರಿಗಿಂತ ಖಾಲಿ ಖುರ್ಚಿಗಳೇ ಜಾಸ್ತಿಯಾಗಿ ಕಂಡುಬಂದವು.
ಆಮಂತ್ರಣದಲ್ಲಿದ್ದವರೇ ಗೈರು: ಇನ್ನು ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಸೇರಿಸಲಾಗಿದ್ದ ಚಿಂತಕರು, ಸಾಹಿತಿಗಳು, ಮುಖಂಡರು, ಕಸಾಪ ಸೇರಿ ವಿವಿಧ ಸಂಘಟನೆಗಳ ಸದಸ್ಯರು, ಮುಖ್ಯ ಅತಿಥಿಗಳು,ಆಶಯ ನುಡಿಗಳನ್ನಾಡುವವರು, ನಿರ್ವಹಣೆ, ಸ್ವಾಗತ, ವಂದನಾರ್ಪಣೆ ಮಾಡುವವರೇ ಗೈರಾಗಿದ್ದರು.
ರಾಯಚೂರಿನ ರಂಗಮಂದಿರದ ಆವರಣದಲ್ಲಿ ಸಮ್ಮೇಳನ ಪ್ರಯುಕ್ತ ಸ್ಥಾಪಿಸಿದ್ದ ಮಳಿಗೆಗಳ ಮುಂದೆ ಬೆರಳೆಣಿಕೆಯಷ್ಟು ಜನರು ನಿಂತಿರುವುದು.
ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಮಧ್ಯಾಹ್ನ ನಡೆದ ಗಮಕ ವಾಚನದಲ್ಲಿ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವಿದ್ವಾನ್ ಡಾ.ಖಾಸೀಮ್ ಮಲ್ಲಿಗೆಮಡವು ಹಾಗೂ ದಾಸ ಸಾಹಿತ್ಯ ವಿದ್ವಾಂಸರಾದ ಡಾ.ಶೀಲಾದಾಸ್ ಅವರು ಕುಮಾರವ್ಯಾಸ ಭಾರತದಲ್ಲಿ ದುರ್ವಾಸ ಅತಿಥ್ಯ-ಪ್ರಸಂಗದ ಕುರಿತು ಕಾವ್ಯವಾಚನ ಹಾಗೂ ವ್ಯಾಖ್ಯಾನವನ್ನು ನಡೆಸಿಕೊಟ್ಟರು.