ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬಾ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆ ಸುತ್ತಮುತ್ತಲಿನ 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ಭಾನುವಾರ ಜರುಗಿತು. ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿ ಹಾಗೂ ಪಾಳ್ಯ ಹೋಬಳಿಗೆ ಹಾಗೂ ಕೊಡಗು ಜಿಲ್ಲೆಗೆ ಸೇರಿದ ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳ ಅಧಿದೇವತೆಯಾಗಿರುವ ಕೆಂಚಾಂಬಾ ದೇವಿ ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಣಿ, ಇಂದ್ರಾಣಿ, ಚಾಮುಂಡಿ ದೇವಿಯರಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಕೈಂಕರ್ಯವನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು.
ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬಾ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆ ಸುತ್ತಮುತ್ತಲಿನ 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ಭಾನುವಾರ ಜರುಗಿತು.ಹಾಸನಾಂಬಾ ದೇವಸ್ಥಾನದ ಬಾಗಿಲು ಹಾಕಿದ ನಂತರ ಪುರಾತನ ಕಾಲದ ವಾಡಿಕೆಯಂತೆ ಈ ವರ್ಷವೂ ಸಹ ಶನಿವಾರ ಶ್ರೀ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಗಳು ಪ್ರಾರಂಭವಾಗಿ ಭಾನುವಾರ ಪೂಜಾ ಕೈಂಕರ್ಯಗಳೊಂದಿಗೆ ಮುಕ್ತಾಯಗೊಂಡಿತು. ಶಾಸಕ ಸಿಮೆಂಟ್ ಮಂಜು ಹಾಗೂ ಮಾಜಿ ಸಚಿವ ಎಚ್ ಕೆ ಕುಮಾರಸ್ವಾಮಿ, ಜಿಲ್ಲಾ ಸಂಸದ ಶ್ರೇಯಸ್ ಪಟೇಲ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್ ಮಂಜೇಗೌಡ ಸೇರಿದಂತೆ ದೇವಸ್ಥಾನದ ಪ್ರಧಾನ ಆರ್ಚಕ ಎಚ್. ಎನ್. ರಾಮಸ್ವಾಮಿ ಕುಟುಂಬ ಸದಸ್ಯರಾದ ಸತ್ಯನಾರಾಯಣ್ ಹಾಗೂ ದೇವಾಲಯದ ದಾಸೋಹ ಸಮಿತಿಯ ಅಧ್ಯಕ್ಷ ಗೋಪಾಲ(ರಘು) ಸೇರಿದಂತೆ ಹಲವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ಪಾದಮುಟ್ಟಿ ನಮಸ್ಕರಿಸಿದರು.ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿ ಹಾಗೂ ಪಾಳ್ಯ ಹೋಬಳಿಗೆ ಹಾಗೂ ಕೊಡಗು ಜಿಲ್ಲೆಗೆ ಸೇರಿದ ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳ ಅಧಿದೇವತೆಯಾಗಿರುವ ಕೆಂಚಾಂಬಾ ದೇವಿ ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಣಿ, ಇಂದ್ರಾಣಿ, ಚಾಮುಂಡಿ ದೇವಿಯರಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಕೈಂಕರ್ಯವನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು. ಈ ಸಮಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಸಮಾಗಮನವನ್ನು ನೋಡಬಹುದಾಗಿದ್ದು, ನಂತರ ದೇವಾಲಯ ಆವರಣದಲ್ಲಿರುವ ಸುಗ್ಗಿ ಕಟ್ಟೆ ಮುಂದೆ ವಿಶೇಷ ಪೂಜೆ ನೆರವೇರಿಸಿದ ನಂತರ ಜನರು ಸುಗ್ಗಿ ಕಟ್ಟೆ ಮುಂದೆ ಕುಣಿದು ಸಂಭ್ರಮಿಸಿದರು.ಉತ್ಸವಮೂರ್ತಿ ಮೆರವಣಿಗೆ:
ಭಾನುವಾರ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ, ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬಾ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಒಡೆದು, ಈಡುಗಾಯಿ ಒಡೆಯಲಾಯಿತು. ಮೆರವಣಿಗೆ ದೇವಸ್ಥಾನದ ಬಳಿ ಬಂದ ನಂತರ, ಹುತ್ತದ ರೂಪದಲ್ಲಿರುವ ಕೆಂಚಾಂಬಾ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿವಿಧಾನಗಳು ಜರುಗಿದವು. ಮಹಾ ಮಂಗಳಾರತಿ ನೆರವೇರಿಸಿ ಬಲಿಪ್ರದಾನ ಮಾಡಲಾಯಿತು. ನಂತರ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾಂಬಾ ದೇವಿಯ ಬೆಳ್ಳಿ ಪಾದದೊಂದಿಗೆ ವಾದ್ಯಗೋಷ್ಠಿಯಲ್ಲಿ ಕರೆತಂದು ಕೆಂಡೋತ್ಸವ ನಡೆಸಲಾಯಿತು. ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ 11 ಗಂಟೆವರೆಗೂ ಅವಕಾಶ ಕಲ್ಪಿಸಲಾಗಿತ್ತು.ನ. 21ರವರೆಗೆ ದೇವಸ್ಥಾನದ ಬಾಗಿಲು ಬಂದ್:ಪುರಾತನ ಕಾಲದ ವಾಡಿಕೆಯಂತೆ ನವೆಂಬರ್ 16ರಿಂದ ನವೆಂಬರ್ 21ರವರೆಗೂ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನವೆಂಬರ್ 21ರಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಅಂದು ಬಾಗಿಲು ತೆರೆಯುವ ಜಾತ್ರೆ ನಡೆಸಲಾಗುತ್ತದೆ. ನಂತರ ಪುಣ್ಯಾ, ಸ್ವಸ್ತಿವಾಚನ ಪೂರ್ವಕವಾಗಿ ನಡೆಯಲಿವೆ.
ದೇಗುಲ ಇತಿಹಾಸ: ಮಹಿಷಾಸುರನನ್ನು ಶ್ರೀ ಚಾಮುಂಡೇಶ್ವರಿ ಸಂಹರಿಸಿದ ನಂತರ ಅವನ ಮಂತ್ರಿಯಾಗಿದ್ದ ರಕ್ತಬೀಜಾಸುರ ರಾಕ್ಷಸ ದೇವಿಯಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬರುತ್ತಾನೆ. ಅವನ ಉಪಟಳ ದಿನೇ ದಿನೆ ಹೆಚ್ಚಾಗಿ ಇಲ್ಲಿನ ಪ್ರಾಣಿ, ಪಶು, ಪಕ್ಷಿಗಳಾದಿಯಾಗಿ ಮಾನವರಿಗೂ ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಮಾನವರ ಮೊರೆಗೆ ಓಗೊಟ್ಟು ರಕ್ತಬೀಜಾಸುರನ ಸಂಹಾರಕ್ಕೆಂದು ಹರಿಹಳ್ಳಿಯಲ್ಲಿ ಆದಿಶಕ್ತಿ ಅವತರಿಸುತ್ತಾಳೆ ಎನ್ನುತ್ತಾರೆ ಶ್ರೀ ಕೆಂಚಾಂಬಿಕೆ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಸ್ವಾಮಿ, ಇವಳು ಸರಸ್ವತಿ, ಪಾರ್ವತಿ ಹಾಗೂ ಲಕ್ಷ್ಮೀಯರ ಸಂಪೂರ್ಣ ಶಕ್ತಿ ಪಡೆದು ಇಲ್ಲಿಗೆ ಬಂದು ರಾಕ್ಷಸರೊಡನೆ ಯುದ್ಧ ಮಾಡಿ ಅನೇಕರನ್ನು ಸಂಹಾರ ಮಾಡುತ್ತಾಳೆ. ಆದರೆ ರಕ್ತ ಬೀಜಾಸುರನನ್ನು ಕೊಲ್ಲುವುದು ಸುಲಭದ ಮಾತಾಗಿರುವು ದಿಲ್ಲ. ಅವನ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಅವನಷ್ಟೇ ಶಕ್ತಿಯುಳ್ಳ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರು. ಹೀಗಾಗಿ ಆದಿಶಕ್ತಿ ಕೆಂಚಾಂಬಿಕೆಯು ಈತನನ್ನು ಉಪಾಯದಿಂದ ಸಂಹರಿಸುವ ಸಂಕಲ್ಪ ಮಾಡಿ ತನ್ನ ನಾಲಿಗೆಯನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಾಕ್ಷಸ ಬರುವಂತೆ ಮಾಡಿ ಕೊಂದಳು. ಹೀಗೆ ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳ ದಲ್ಲೇ ಕೆಂಚಾಂಬಿಕೆ ನೆಲೆಸಿದ್ದಾಳೆ. ಎಂದು ಇತಿಹಾಸ ಹೇಳುತ್ತದೆ. ಈ ಕಥೆಗೆ ಪೂರಕವಾಗಿ ಇಲ್ಲಿನ ಮಣ್ಣು ಕೆಂಪಾಗಿದೆ ಎಂದು ದೇಗುಲದ ಪ್ರಧಾನ ಅರ್ಚಕ ರಾಮಸ್ವಾಮಿ ಹೇಳುತ್ತಾರೆ.