ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ಸಹವರ್ತಿ ಮಧಾರಿಯಾದ ಧರ್ಮಗುರು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ (ಮುನಾವರ್ ಪಾಷಾ) ಅವರ ಹುಟ್ಟುಹಬ್ಬವನ್ನು ಪೌರ ಕಾರ್ಮಿಕರು ಮತ್ತು ಶ್ರಮಿಕ ವರ್ಗದವರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ವಿವಿಧ ಧರ್ಮಗುರುಗಳ ಸಾನ್ನಿಧ್ಯದಲ್ಲಿ ನಡೆದ ಜನ್ಮ ದಿನಾಚರಣೆ ಸಮಾರಂಭದಲ್ಲಿ ಸುಮಾರು 350 ಹೆಚ್ಚು ಶ್ರಮಿಕ ವರ್ಗದವರನ್ನು ಗೌರವಿಸಿ, ಸಹಪಂಕ್ತಿ ಭೋಜನ ಏರ್ಪಡಿಸಲಾಗಿತ್ತು.
ಈ ವೇಳೆ ಸಹವರ್ತಿ ಮಧಾರಿಯಾದ ಧರ್ಮಗುರು ಅಪ್ಸರ್ ಮುನಾವರ್ ಆಲಿಷಾ ಖಾದ್ರಿ ಮಾತನಾಡಿ, ಸಮಾಜದಲ್ಲಿ ಉಳ್ಳವರು ಮತ್ತು ಹೃದಯವಂತರು ಜನ್ಮದಿನ ಆಚರಣೆಯ ನೆಪದಲ್ಲಿ ಅನಗತ್ಯವಾಗಿ ಹಣ ವ್ಯಯ ಮಾಡದೆ ನೊಂದವರು ಮತ್ತು ಕಾಯಕ ಜೀವಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಬೇಕು. ಆ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದರು.ಮುಂದಿನ ದಿನಗಳಲ್ಲಿ ಬಡವರ್ಗದ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಕೇಂದ್ರ ತೆರೆಯಲಿದ್ದು ತರಬೇತಿ ಪಡೆದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲು ತೀರ್ಮಾನಿಸಲಾಗಿದೆ. ಪ್ರತಿ ತಿಂಗಳ ಕೊನೆಯ ದಿನ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಸಲಾಗುತ್ತದೆ ಎಂದು ಅವರು ಹೇಳಿದರು.
ಔಷಧಿ ಖರೀದಿಸಲು ಹಣ ಇಲ್ಲದ ಬಡವರನ್ನು ಗುರುತಿಸಿ ಅವರಿಗೆ ಒಂದು ತಿಂಗಳಿಗಾಗುವಷ್ಟು ಔಷಧಿ ಮಾತ್ರೆಗಳನ್ನು ಕೊಡಿಸಲಾಗುವುದು. ನಾವು ಸೇವಾ ಕಾರ್ಯವನ್ನು ಜಾತ್ಯಾತೀತವಾಗಿ ಮತ್ತು ಧರ್ಮಾತೀತವಾಗಿ ಮಾಡುತ್ತಿದ್ದು ಎಲ್ಲರೂ ನನ್ನನ್ನು ನಿಮ್ಮ ಕುಟುಂಬದವನೆಂದು ಪರಿಗಣಿಸಿ ಸಹಕಾರ ನೀಡಬೇಕು ಎಂದು ಕೋರಿದರು.ಧರ್ಮ ಗುರುಗಳಾದ ಅಹಮದ್ ಷಾ ಸವೋರ್ದಿ, ಅಸದ್ ಬಾವಾ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವರಾಜು, ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಿಕ್ ಖಾನ್, ಉದ್ಯಮಿ ನರಸಿಂಹಮೂರ್ತಿ, ಡಾ. ದೇವೇಂದ್ರಪ್ಪ, ಮುಜಾಜಿ ಅಹಮ್ಮದ್, ಜಾನಪದ ಪರಿಷತ್ ನ ಪದಾಧಿಕಾರಿಗಳಾದ ಸೈಯದ್ ರಿಜ್ವಾನ್, ರಾಜಯ್ಯ, ತಿಮ್ಮಶೆಟ್ಟಿ, ವ್ಯಾನ್ ಸುರೇಶ್, ಮಂಜುನಾಥ್, ರಾಮಶೆಟ್ಟಿ, ರವಿಕುಮಾರ್, ಶಿವಶಂಕರ್, ಅರ್ಜುನ್ಕುಮಾರ್, ಸಿರಾಜ್ ಮೊದಲಾದವರು ಇದ್ದರು.