ಬಿರೂರು: ಉತ್ತಮ ಗುಣಮಟ್ಟದ ಕಾಮಗಾರಿಗೆ ಡಿಸಿ ಮೀನಾನಾಗರಾಜ್ ಮೆಚ್ಚುಗೆ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ಅಮೃತ್ ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ ಬೀರೂರು ಪಟ್ಟಣಕ್ಕೆ ಸರ್ಕಾರದಿಂದ ಒಟ್ಟು 5.67 ಕೋಟಿ ರು. ಮಂಜುರಾಗಿತ್ತು. ಇದರಲ್ಲಿ ಸುಮಾರು 3 ಕಿಮೀ ಟಾರ್ ರಸ್ತೆ, 3 ಕಿ.ಮೀ ಕಾಂಕ್ರೀಟ್ ರಸ್ತೆ ಮತ್ತು ಸುಮಾರು 2ಕಿ.ಮೀ ನಷ್ಟು ಸಿಸಿ ಕಾಂಕ್ರೀಟ್ ಚರಂಡಿ ಮಾಡಲಾಗಿದ್ದು ಇದಕ್ಕೆ ಒಟ್ಟು 4 . 66 ಕೋಟಿ. ರು.ವೆಚ್ಚವಾಗಿದೆ. ಕಾಮಗಾರಿ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿದಾಗ ಮಾಡಿದ ಎಲ್ಲಾ ಕೆಲಸಗಳು ಉತ್ತಮ ಗುಣಮಟ್ಟದ್ದಾಗಿವೆ ಎಂದು ಡಿಸಿ ಮೀನಾ ನಾಗರಾಜ್‌ ತಿಳಿಸಿದರು.

- 4ನೇ ಹಂತದ ಅಮೃತ ನಗರೋತ್ಥಾನ ಯೋಜನೆ 4. 66 ಕೋಟಿ ರು.ಕಾಮಗಾರಿ ಪರಿಶೀಲನೆ:ಕನ್ನಡಪ್ರಭ ವಾರ್ತೆ,ಬೀರೂರು:

ಕಳೆದ 8ತಿಂಗಳ ಹಿಂದಷ್ಟೆ ಪಟ್ಟಣ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನ 4ನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಶುಕ್ರವಾರ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

ಆರಂಭದಲ್ಲಿ ರಾಜಾಜಿ ನಗರ, ಮರಾಠಿ ಕಾಲೋನಿ, ಹಳೇಪೇಟೆ ಶ್ರೀ ವೀರಭದ್ರಸ್ವಾಮಿ ದೇವಾಲಯದ ರಸ್ತೆ, ಹಾಗೂ ಮಾರ್ಗದ ಕ್ಯಾಂಪ್ ನಲ್ಲಿ ನಡೆದ ಟಾರ್, ಕಾಂಕ್ರೀಟ್ ರಸ್ತೆ ಮತ್ತು ಸಿಸಿ ಚರಂಡಿಗಳನ್ನು ಪಿಎಂಸಿ ಇಂಜಿನಿಯರ್ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳ ಮೂಲಕ ಮಾಡಿರುವ ಕಾಮಗಾರಿಗಳಿಗೆ ರಸ್ತೆಗಳ ಅಳತೆ ಮಾಡಿ ಉದ್ದ ಅಗಲ ಅಳೆದು, ಕೋರ್ ಕಟ್ಟಿಂಗ್ ಮುಖಾಂತರ ಆಳ, ಮತ್ತು ಕಾಂಕ್ರೀಟ್‌ನ ಬಲವನ್ನು ರೀಬೌಂಡ್ ಹ್ಯಾಮರ್ ಕಟ್ಟಿಂಗ್ ಮೂಲಕ ಅಧಿಕಾರಿಗಳ ಸಮ್ಮುಖದಲ್ಲಿ ಮಾಡಲಾಯಿತು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿ ಮೀನಾ ನಾಗರಾಜ್, ಅಮೃತ್ ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ ಬೀರೂರು ಪಟ್ಟಣಕ್ಕೆ ಸರ್ಕಾರದಿಂದ ಒಟ್ಟು 5.67 ಕೋಟಿ ರು. ಮಂಜುರಾಗಿತ್ತು. ಇದರಲ್ಲಿ ಸುಮಾರು 3 ಕಿಮೀ ಟಾರ್ ರಸ್ತೆ, 3 ಕಿ.ಮೀ ಕಾಂಕ್ರೀಟ್ ರಸ್ತೆ ಮತ್ತು ಸುಮಾರು 2ಕಿ.ಮೀ ನಷ್ಟು ಸಿಸಿ ಕಾಂಕ್ರೀಟ್ ಚರಂಡಿ ಮಾಡಲಾಗಿದ್ದು ಇದಕ್ಕೆ ಒಟ್ಟು 4 . 66 ಕೋಟಿ. ರು.ವೆಚ್ಚವಾಗಿದೆ. ಕಾಮಗಾರಿ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿದಾಗ ಮಾಡಿದ ಎಲ್ಲಾ ಕೆಲಸಗಳು ಉತ್ತಮ ಗುಣಮಟ್ಟದ್ದಾಗಿವೆ ಎಂದು ಅಭಿಪ್ರಾಯಪಟ್ಟರು.

ಉಳಿದ 1ಕೋಟಿ ರು. ಗಳಿಗೆ ಮುಂದಿನ ದಿನಗಳಲ್ಲಿ ತಾಂತ್ರಿಕ ಸಲಹೆ ಮತ್ತು ಅನುಮೋದನೆ ಪಡೆದು ಕಾಮಗಾರಿ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಈ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವಡೆ ಸ್ವಲ್ಪ ಕಾಮಗಾರಿ ಬಿಡಲಾಗಿದ್ದು, ಆದಷ್ಟು ಬೇಗನೆ ಮುಗಿಸುವಂತೆ ಅಧಿಕಾರಿ ಮತ್ತು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ರಾಜಾಜಿ ನಗರ ಬಡಾವಣೆ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಿ. ಡಿ.ದೇವರಾಜ್ ಅರಸು ಅಲೆಮಾರಿ, ಅರೆ ಅಲೆಮಾರಿ ಆಶ್ರಮ ಶಾಲೆಗೆ ಭೇಡಿ ನೀಡಿದ ಜಿಲ್ಲಾಧಿಕಾರಿ ಶಾಲೆಯ ಅಡುಗೆ ಕೊಠಡಿ, ವಿದ್ಯಾರ್ಥಿಗಳು ಮಲಗುವ ಕೋಣೆಗಳಿಗೆ ಭೇಟಿ ನೀಡಿದರು.

ಪ್ರಿಡ್ಜ್ ಒಳಗೆ ಇಡಬೇಕಾದ ತರಕಾರಿಗಳನ್ನು ಹೀಗೆ ಇಟ್ಟರೇ ಹಾಳಾಗುವುದಿಲ್ಲವೇ? ಪ್ರಶ್ನಿಸಿದ ಅವರಿಗೆ ಅಡುಗೆ ಸಿಬ್ಬಂದಿ ಪ್ರಿಡ್ಜ್ ಕೆಟ್ಟು ಹೋಗಿದೆ ಎಂದಾಗ ಆದಷ್ಟು ಬೇಗಾ ಸರಿಪಡಿಸಿ ಸಮರ್ಪಕವಾಗಿ ಇಟ್ಟುಕೊಳ್ಳಿ ಎಂದು ಸೂಚಿಸಿದರು.

ಮಾರ್ಗದ ಕ್ಯಾಂಪಿನ ಸಿಸಿ ರಸ್ತೆ ವೀಕ್ಷಣೆ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು, ಇಲ್ಲಿ ಯುಜಿಡಿ ಸಮಸ್ಯೆ ಜೊತೆ, ಮಾಡಿರುವ ಸಿಸಿ ರಸ್ತೆಗೆ ಸಮರ್ಪಕ ಡಕ್ ಸ್ಲ್ಯಾಬ್ ಮಾಡಿಯೇ ಇಲ್ಲ, ಈ ರಸ್ತೆಯಲ್ಲಿ ಸಂಚಾರ ಮಾಡುವುದಾದರೂ ಹೇಗೆ, ಪುರಸಭೆ ಕಸದ ವಾಹನಗಳು ನಮ್ಮ ಮನೆಗಳಿಗೆ ಬರುತ್ತಿಲ್ಲ ಬಹಳ ಸಮಸ್ಯೆಯಾಗಿದೆ ಎಂದು ಮನವಿ ಮಾಡಿದಾಗ, ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಪುರಸಭೆ ಎಸ್ಎಫ್.ಸಿ ಯೋಜನೆಯಡಿ ಇಂತಹ ಕಾಮಗಾರಿಗಳಿಗಾಗಲೇ ಟೆಂಡರ್ ಕರೆಯಲಾಗಿದ್ದು ಆದಷ್ಟು ಬೇಗ ಕ್ರಮವಹಿಸುವುದಾಗಿ ತಿಳಿಸಿದರು.

ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಇಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ, ಜೊತೆಗೆ ಇಲ್ಲಿಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಬೇರೆಡೆ ಕೆಲಸ ಮಾಡಿ ಇಲ್ಲಿ ಸಂಬಳಪಡೆಯುತ್ತಿದ್ದಾರೆ. ಕರವಸೂಲಿ ಗಾರರಿಲ್ಲದ ಕಾರಣ ನಾಗರಿಕರಿಗೆ ತೊಂದರೆಯಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಡಿಸಿ ಮೀನಾ ನಾಗರಾಜ್, ನಗರ ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಿ ಎಂದು ಸೂಚಿಸಿದರು.

ನಾಗರಿಕ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಹೊಸಜ್ಜಂಪುರ ರಸ್ತೆಯ ಎರಡು ಬದಿ ಭೂಮಾಲೀಕರು ಸರ್ಕಾರದಿಂದ ಹಣ ಪಡೆದಿದ್ದರು. ಪುರಸಭೆ ಫುಟ್ಪಾತ್ ನಿರ್ಮಾಣಕ್ಕೆ ಜಾಗ ಬಿಡಿಸಿಕೊಂಡಿಲ್ಲ. ಅನೇಕ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದಾಗ ಮುಖ್ಯಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಎಸ್.ಎಸ್.ಮತ್ತಿಕಟ್ಟಿ, ಜಿಲ್ಲಾ ಯೋಜನಾ ನಿರ್ದೇಶಕಿ ಎಸ್.ಎಲ್.ನಾಗರತ್ನ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪ್ರಸನ್ನಕುಮಾರ್, ಮುಖ್ಯಾಧಿಕಾರಿ ವಿ.ಡಿ.ಶಾಂತಲ, ಇಂಜಿನಿಯರ್ ವೀಣಾ, ನೂರುದ್ದೀನ್, ಸೇರಿದಂತೆ ಮತ್ತಿತರರು ಇದ್ದರು.

5 ಬೀರೂರು 1

ಬೀರೂರು ಪಟ್ಟಣದಲ್ಲಿ ಅಮೃತ್ ನಗರೋತ್ಥಾನ 4ನೇಹಂತದ ರಸ್ತೆಕಾಮಗಾರಿಗಳು ಮುಕ್ತಾಯ ಗೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

Share this article