ಕೊಪ್ಪಳ: ಕಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯಬೇಕು ಮತ್ತು ಔಷಧಿಗೆ ಚೀಟಿಯನ್ನು ಬರೆದುಕೊಟ್ಟರೆ ಸಹಿಸುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿಯ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (20 ಅಂಶಗಳು ಸೇರಿದಂತೆ) 2025-26ನೇ ಸಾಲಿನ 3ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು, ಬಡವರು ಚಿಕಿತ್ಸೆಗೆ ಬಂದರೆ ಔಷಧಿಯನ್ನು ಹೊರಗಡೆ ತನ್ನಿ ಎಂದು ಚೀಟಿ ಬರೆದುಕೊಡಲಾಗುತ್ತದೆ ಎಂದು ಆರೋಪಿಸಿದರು. ಇದಕ್ಕೆ ಆಕ್ರೋಶಗೊಂಡ ಸಚಿವರು, ಇದಕ್ಕೆ ಅವಕಾಶ ನೀಡಕೂಡದು ಎಂದು ಖಡಕ್ ಸೂಚನೆ ನೀಡಿದರು.
ಕಿಮ್ಸ್ ನಿರ್ದೇಶಕ ವಿಜಯಕುಮಾರ ಇಟಗಿ ಮಾತನಾಡಿ, ಆಸ್ಪತ್ರೆಯಲ್ಲಿ ಎಲ್ಲ ಔಷಧಿಗಳು ಸ್ಟಾಕ್ ಇವೆ. ಯಾವುದೇ ಔಷಧಿ ಬರೆದುಕೊಡುವ ಪ್ರಶ್ನೆಯೇ ಇಲ್ಲ. ಅಷ್ಟಕ್ಕೂ ಇಲ್ಲದೆ ಇರುವ ಔಷಧವನ್ನು ತತ್‌ಕ್ಷಣ ಖರೀದಿ ಮಾಡಿಕೊಡುವುದಕ್ಕೆ ಪ್ರತಿ ನಿತ್ಯ ₹10 ಸಾವಿರ ವೆಚ್ಚ ಮಾಡುವುದಕ್ಕೆ ಸರ್ಕಾರ ಆದೇಶವನ್ನೇ ನೀಡಿದೆ ಎಂದು ಹೇಳಿದರು. ಹಾಗಾದರೂ ಯಾಕೆ ಔಷಧಿಯನ್ನು ಬರೆದುಕೊಡಲಾಗುತ್ತದೆ ಎಂದು ಪ್ರಶ್ನೆ ಮಾಡಿದರು.ಮಧ್ಯೆ ಪ್ರವೇಶ ಮಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಔಷಧಿಗಾಗಿ ಎಷ್ಟು ಖರ್ಚು ಮಾಡುತ್ತೀರಿ ಎನ್ನುವ ಮಾಹಿತಿ ನೀಡಿ ಎಂದರು. ಪ್ರತಿ ವರ್ಷ ಮೂರೂವರೆ ಕೋಟಿ ರುಪಾಯಿ ವೆಚ್ಚ ಮಾಡುತ್ತೇವೆ ಎಂದಾಗ ಇಷ್ಟಾದರೂ ಯಾಕೆ ಸಮಸ್ಯೆಯಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲ, ಆಸ್ಪತ್ರೆಯ ಸ್ವಚ್ಛತೆ ವಿಷಯದಲ್ಲಿ ಈಗಲೂ ಹಾಗೆ ಇದೆ. ಎಷ್ಟೇ ಕಟ್ಟುನಿಟ್ಟಿನ ಸೂಚನೆಯ ನಡುವೆಯೂ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಆರೋಪಿಸಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಈಗ ಬಂದಿರುವ ಆರೋಪಗಳು ತತ್‌ಕ್ಷಣ ಕೊನೆಯಾಗಬೇಕು. ಇಲ್ಲದಿದ್ದರೆ ನಾವು ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಸದ್ಯ 12 ಹೋಬಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಇನ್ನೂ ಎಂಟು ಕಡೆ ಸಮುದಾಯ ಆರೋಗ್ಯ ಕೇಂದ್ರಗಳ ನಿರ್ಮಾಣ ಆಗಬೇಕು. ಅವುಗಳ ಉನ್ನತೀಕರಣಕ್ಕೆ ಮತ್ತು ಜಿಲ್ಲೆಯ ಇಪ್ಪತ್ತು ಹೋಬಳಿಗಳಲ್ಲಿ ಕನಿಷ್ಠ 30 ಬೆಡ್‌ಗಳ ಆಸ್ಪತ್ರೆ ಜತೆಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇತರ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವೇಗವಾಗಿ ಆರೋಗ್ಯ ಸೇವೆಯನ್ನು ನೀಡಬೇಕು ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರ ಪ್ರತಿವರ್ಷ ಹೆಚ್ಚಾಗುತ್ತಿದ್ದು, ತೋಟಗಾರಿಕೆ ಕ್ಷೇತ್ರದ ಹೆಚ್ಚಳಕ್ಕೆ ನಮ್ಮ ಸರ್ಕಾರದ ಕೃಷಿಹೊಂಡ, ಕೆರೆ ತುಂಬಿಸುವ ಯೋಜನೆ ಪ್ರಮುಖ ಕಾರಣವಾಗಿವೆ. ಹಾಗಾಗಿ ಈ ಯೋಜನೆಗಳ ಅನುಷ್ಠಾನಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು. ರೈತರಿಗೆ ಉತ್ತಮ ಮಾರುಕಟ್ಟೆ ಜತೆಗೆ ಪ್ರೊಸೆಸ್ಸಿಂಗ್ ಯುನಿಟ್ ಮಾಡಬೇಕು ಎಂದು ಸೂಚನೆ ನೀಡಿದರು.ಎಸ್‌ಎಸ್‌ಎಲ್‌ಸಿ ಫಲಿತಾಂಶ: ಎಸ್‌ಎಸ್‌ಎಲ್‌ಸಿ ಫಲಿತಾಂಶ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಬೇಸರದ ಸಂಗತಿ. ಈ ವರ್ಷ ಅದಕ್ಕೆ ಅವಕಾಶ ನೀಡದೆ, ಫಲಿತಾಂಶ ಸುಧಾರಣೆಯಾಗುವಂತಾಗಲಿ ಎಂದು ಸೂಚಿಸಿದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿಲ್ಲ. ಜಿಲ್ಲಾಸ್ಪತ್ರೆಗೆ ಕೂಡಲೆ ಜೆಟ್ಟಿಂಗ್ ಮತ್ತು ಸಕ್ಕಿಂಗ್ ಮಷಿನ್‌ನಂತಹ ಸ್ವಚ್ಛತಾ ಯಂತ್ರಗಳನ್ನು ಖರೀದಿಸುವ ಮೂಲಕ ಆಸ್ಪತ್ರೆಯ ಸ್ವಚ್ಛತೆಗೆ ಕ್ರಮ ವಹಿಸಬೇಕು ಎಂದು ಕಿಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದರು.ಶಾಸಕ ಜಿ. ಜನಾರ್ದನ ರೆಡ್ಡಿ ಮಾತನಾಡಿ, ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮವು ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದ್ದು, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ಮತ್ತು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಭದ್ರತೆಯ ದೃಷ್ಟಿಯಿಂದ ಆನೆಗೊಂದಿಯಲ್ಲಿ ಒಂದು ಪೊಲೀಸ್ ಠಾಣೆ ನಿರ್ಮಾಣದ ಅತ್ಯವಶ್ಯಕತೆಯಿದೆ ಎಂದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಈ ಬಗ್ಗೆ ಗೃಹ ಸಚಿವರಲ್ಲಿ ಪ್ರಸ್ತಾಪಿಸಿ, ಆನೆಗೊಂದಿಗೆ ಪೊಲೀಸ್ ಠಾಣೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಪಿ. ಮೋಹನ್‌ರಾಜ್, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ, ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ನಿರ್ಮಲಾ, ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ ಕುಮಾರ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ತ್ರೈಮಾಸಿಕ ಕೆಡಿಪಿ ಸಮಿತಿಯ ನಾಮನಿರ್ದೇಶಿತ ಸದಸ್ಯ ರವಿ ಕುರಗೋಡ, ಹನುಮಂತಗೌಡ ಚಂಡೂರು ಉಪಸ್ಥಿತರಿದ್ದರು.