ಕನ್ನಡಪ್ರಭ ವಾರ್ತೆ ಹಾವೇರಿ
ಬಿಸಿಯೂಟ ತಯಾರಕರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸಂದರ್ಭದಲ್ಲಿ ಭಾನುವಾರ ಪ್ರತಿಭಟನಾನಿರತ ಬಿಸಿಯೂಟ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು.ಲಲಿತಾ ಸುರೇಶ ಮೊಟೇಬೆನ್ನೂರ ಅಸ್ವಸ್ಥಗೊಂಡ ಬಿಸಿಯೂಟ ಕಾರ್ಯಕರ್ತೆಯಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಬಿಸಿಲು, ರಾತ್ರಿಯನ್ನು ಲೆಕ್ಕಿಸದೇ ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದರೂ ಈ ವರೆಗೂ ಯಾವ ಅಧಿಕಾರಿಯೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಅಲ್ಲದೇ ಅಸ್ವಸ್ಥಗೊಂಡ ಮಹಿಳೆಯ ಆರೋಗ್ಯ ವಿಚಾರಿಸದ ಇಲಾಖೆ ಅಧಿಕಾರಿಗಳ ನಡೆಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ೬ನೇ ಗ್ಯಾರಂಟಿಯಾಗಿ ಬಿಸಿಯೂಟ ತಯಾರಕರಿಗೆ ₹೬ ಸಾವಿರ ವೇತನ ನೀಡುವುದು, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ತಯಾರಕರಿಗೆ ಮಾಸಿಕ ₹೬೦೦೦, ವೇತನವನ್ನು ಮತ್ತು ನಿವೃತ್ತಿಯಾದವರಿಗೆ ₹೨.೫ ಲಕ್ಷ ಇಡುಗಂಟು, ಪೆನ್‌ಷನ್ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ವರೆಗೂ ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ೨೦೨೩-೨೪ನೇ ಬಜೆಟ್‌ನಲ್ಲಿ ಮಾಸಿಕ ₹೧೦೦೦ ಹೆಚ್ಚುವರಿಯಾಗಿ ಘೋಷಣೆ ಮಾಡಿದ್ದರೂ ಈಗಿನ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ, ಕೂಡಲೇ ಜಾರಿಗೊಳಿಸಬೇಕು ಎಂದು ಸಂಘಟನೆಯ ಪ್ರಮುಖರು ಆಗ್ರಹಿಸಿದರು.೨೦೦೨-೦೩ರಿಂದ ಯೋಜನೆ ಆರಂಭವಾದಾಗಿನಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ಯೋಜನೆ ಕಾರ್ಯಕರ್ತರಿಗೆ ಇಲ್ಲಿಯವರೆಗೂ ಸೇವಾ ಭದ್ರತೆ ಕಲ್ಪಿಸಿಲ್ಲ. ಇವರನ್ನು ಅರೆಕಾಲಿಕ ಬಿಸಿಯೂಟ ಕಾಯಂ ನೌಕರರೆಂದು ಘೋಷಣೆ ಮಾಡಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಡುಗೆಯವರು ಅಡುಗೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸಿ ಅಪಘಾತಕ್ಕೊಳಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದು ಅವರ ಚಿಕಿತ್ಸೆ ವೆಚ್ಚವಾಗಿ ಪ್ರತಿಯೊಬ್ಬರಿಗೂ ₹೧.೫೦ ಲಕ್ಷ ನೀಡಬೇಕು. ಅಡುಗೆ ಸಿಬ್ಬಂದಿಗೆ ಸಮವಸ್ತ್ರ, ಎಪ್ರಾನ್ ಮತ್ತು ಕೈ ಗವಸಗಳನ್ನು ವರ್ಷಕ್ಕೆ ೨ ಜೊತೆಯಂತೆ ಇಲಾಖೆಯಿಂದಲೇ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸಂಘಟನಾ ಕಾರ್ಯದರ್ಶಿ ವಿನಾಯಕ ಕುರುಬರ, ಜಿಲ್ಲಾಧ್ಯಕ್ಷೆ ಬಿ.ಡಿ. ಪೂಜಾರ, ಲಲಿತಾ ಬುಶೆಟ್ಟಿ, ರಾಜೇಶ್ವರಿ ದೊಡ್ಡಮನಿ, ರೇಖಮ್ಮ ದನ್ನೂರ, ಸರೋಜಮ್ಮ ಹಿರೇಮಠ, ಲತಾ ಹಿರೇಮಠ, ಭಾರತಿ ಕಬನೂರ, ನಿರ್ಮಲಾ ಬಂಕಾಪುರಮಠ ಹಾಗೂ ನೂರಾರು ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಇದ್ದರು.