ಜಿಲ್ಲಾ ಕಾರಾಗೃಹದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಂವಿಧಾನ ನಾಗರೀಕರಿಗೆ ಹಕ್ಕುಗಳನ್ನು ನೀಡುವ ಜೊತೆಗೆ ಕರ್ತವ್ಯಗಳನ್ನು ನೀಡಿದೆ. ಹಾಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಜವಾಬ್ದಾರಿ ಅರಿತು ನಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಶಾಂತಣ್ಣ ಆಳ್ವ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ ಮತ್ತು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ, ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕು ಪಡೆದಿದ್ದು ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ಡಿ.10 ರಂದು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಇಂದು ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗೆಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ದೌರ್ಜನ್ಯದ ವಿರುದ್ಧ ಧನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರಲಿದೆ ಎಂದು ಹೇಳಿದರು.ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಮಾತನಾಡಿ, ಮಾನವ ಹಕ್ಕುಗಳ ದಿನದ ಘೋಷ ವಾಕ್ಯ ಸಮಾನತೆಗೆ ಸಂಬಂಧಿಸಿದ್ದಾಗಿದೆ. ದೇಶದಲ್ಲಿ ಅಸಮಾನತೆ ಕಡಿಮೆ ಮಾಡುವುದು, ಮಾನವ ಹಕ್ಕುಗಳನ್ನು ಮುನ್ನಡೆಸುವುದು ಹಾಗೂ ದೇಶದ ಅಭಿವೃದ್ಧಿಗೆ ಮಾನವ ಹಕ್ಕುಗಳು ಉತ್ತಮ ಮಾರ್ಗ ಎನ್ನುವುದನ್ನು ಕೇಂದ್ರೀಕರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಎಚ್.ಸಿ.ನಟರಾಜ್, ದುಡುಕು ನಿರ್ಧಾರದಿಂದ ಕೆಲವರು ಅಪರಾಧಿಗಳಾಗಿ ಬಂಧಿಯಾಗುತ್ತಾರೆ. ಸೆರೆವಾಸದಲ್ಲಿ ಅನುಭವಿಸಿದ ಶಿಕ್ಷೆ ಪಶ್ಚಾತ್ತಾಪ ವೆಂದು ತಿಳಿದು ಮನಪರಿವರ್ತನೆಗೊಳ್ಳಬೇಕು. ಮುಂದಿನ ಜೀವನದಲ್ಲಿ ಮಾನವ ಹಕ್ಕುಗಳ ಅರಿವು ಹೊಂದಿ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಸಾತ್ವಿಕ ಬದುಕು ನಿಮ್ಮದಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಕಾನೂನು ಪ್ರಾಧಿಕಾರದ ಸಹಾಯಕ ಮುಖ್ಯ ಅಭಿರಕ್ಷಕ ಡಿ.ನಟರಾಜ್ ಉಪನ್ಯಾಸ ನೀಡಿದರು. ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ. ಗೋಪಾಲಕೃಷ್ಣ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ, ಜಿಲ್ಲಾ ಮಾನವ ಹಕ್ಕು ಸಮಿತಿ ಪದಾಧಿಕಾರಿಗಳಾದ ಬನಶಂಕರಿ ಜೋಷಿ, ಪ್ರಭು, ಕೆ.ಆರ್.ಜಗದೀಶ್, ಕೆ.ಸಿ.ಕೃಷ್ಣಯ್ಯಗೌಡ, ಸ್ವರ್ಣಗೌರಿ, ಎಚ್.ಜೆ.ಪರಮೇಶ್ವರ, ಶೈಲ ಬಸವರಾಜು, ಚಂದ್ರಮತಿ, ಸುಶೀಲಮ್ಮ, ಪರಮೇಶ್ವರಪ್ಪ ಉಪಸ್ಥಿತರಿದ್ದರು. 10 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ನ್ಯಾ. ಎಂ.ಶಾಂತಣ್ಣ ಆಳ್ವ ಉದ್ಘಾಟಿಸಿದರು. ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಇದ್ದರು.