ಬೇಂದ್ರೆ ಹುಟ್ಟಿದ ದಿನ ವಿಶ್ವಕವಿ ದಿನ ಆಗುವುದೇ?

KannadaprabhaNewsNetwork | Published : Dec 11, 2023 1:15 AM

ಸಾರಾಂಶ

ಕನ್ನಡ ನಾಡಿಗೆ ವರಕವಿ ಡಾ. ದ.ರಾ. ಬೇಂದ್ರೆ ಅವರು ನೀಡಿದ ಸಾಹಿತ್ಯಿಕ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ ಬೇಂದ್ರೆ ಅವರ ಜನ್ಮದಿನವನ್ನು ವಿಶ್ವಕವಿ ದಿನವೆಂದು ನಾಡಿನಾದ್ಯಂತ ಆಚರಿಸಲು ಪ್ರಸ್ತುತ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಕನ್ನಡ ನಾಡಿಗೆ ವರಕವಿ ಡಾ. ದ.ರಾ. ಬೇಂದ್ರೆ ಅವರು ನೀಡಿದ ಸಾಹಿತ್ಯಿಕ ಕೊಡುಗೆಯನ್ನು ಗೌರವಿಸಿ ಕರ್ನಾಟಕ ಸರ್ಕಾರ ಬೇಂದ್ರೆ ಅವರ ಜನ್ಮದಿನವನ್ನು ವಿಶ್ವಕವಿ ದಿನವೆಂದು ನಾಡಿನಾದ್ಯಂತ ಆಚರಿಸಲು ಪ್ರಸ್ತುತ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದೆ.

ವರಕವಿ ಬೇಂದ್ರೆ ಹಾಗೂ ಕುವೆಂಪು ಕನ್ನಡ ಸಾರಸ್ವತ ಲೋಕದ ನವೋದಯ ಕಾಲಘಟ್ಟದ ಮೇರು ದಿಗ್ಗಜರು. ಈಗಾಗಲೇ ಕುವೆಂಪು ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ. ದಕ್ಷಿಣದಲ್ಲಿ ಕುವೆಂಪು ಅವರಂತೆ, ಉತ್ತರದಲ್ಲಿ ಬೇಂದ್ರೆ ಅವರು ಮನೆ ಮಾತಾಗಿದ್ದಾರೆ. ಹೀಗಾಗಿ, ಬರುವ ಜ. 31ರಂದು ಬೇಂದ್ರೆ ಅವರ 128ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶ್ವಕವಿ ದಿನವಾಗಿ ಆಚರಿಸಲು ಆದೇಶ ಹೊರಡಿಸಲು ಟ್ರಸ್ಟ್‌ ಒತ್ತಾಯಿಸಿದೆ.

ಅನುದಾನದ ಪ್ರಸ್ತಾಪ:

ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ 1993ರಲ್ಲಿ ಪ್ರಾರಂಭಗೊಂಡಿದ್ದು, ಅಂದಿನಿಂದ ಇಂದಿನ ವರೆಗೂ ಬೇಂದ್ರೆ ಸಾಹಿತ್ಯ, ಸಂಗೀತ, ನಾಟಕದಂತಹ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ ಜ. 31ರಂದು ಜನ್ಮದಿನ ನಿಮಿತ್ತ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ನಾಡಿನ ಶ್ರೇಷ್ಠ ಕವಿ, ಸಾಹಿತಿ, ಚಿಂತಕರಿಗೆ ನೀಡಲಾಗುತ್ತಿದೆ. ಈ ವರೆಗೆ 22 ಗಣ್ಯರಿಗೆ, 3 ಸಂಘ-ಸಂಸ್ಥೆಗಳಿಗೆ ವರಕವಿ ಹೆಸರಿನ ₹1 ಲಕ್ಷ ಮೊತ್ತದ ಪ್ರಶಸ್ತಿ ನೀಡಲಾಗಿದೆ. 2022-23ನೇ ವರ್ಷದಲ್ಲಿ 127ನೇ ಜಯಂತಿ ನಿಮಿತ್ತ ವರ್ಷಪೂರ್ತಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಬೇಂದ್ರೆ ಅವರ ಸಾಹಿತ್ಯವನ್ನು ರಾಷ್ಟ್ರೀಯ ಭಾಷೆಗಳಿಗೆ ಅನುವಾದ, ಪ್ರಕಟನಾ ಕಾರ್ಯವನ್ನು ಕೈಗೊಳ್ಳಲು ಟ್ರಸ್ಟ್‌ ನಿರ್ಣಯಿಸಿದೆ. ಈ ಕಾರ್ಯಗಳಿಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಲು ಹಾಗೂ ಬೇಂದ್ರೆ ಅವರ ಜನ್ಮದಿನವನ್ನು ವಿಶ್ವಕವಿ ದಿನವಾಗಿ ಆಚರಿಸಲು ಚಳಿಗಾಲದ ಅಧಿವೇಶನದಲ್ಲಿ ಘೋಷಣೆ ಮಾಡಬೇಕು ಎನ್ನುವುದು ಟ್ರಸ್ಟ್‌ ಮುಖ್ಯಮಂತ್ರಿಗಳಿಗೆ ಡಿ. 10ರಂದು ಬರೆದಿರುವ ಪತ್ರದಲ್ಲಿರುವ ಮನವಿ.

ಈ ಎರಡೂ ವಿಚಾರವಾಗಿ ಹಲವು ಬಾರಿ ಈ ಹಿಂದಿನ ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ಆದರೆ, ಸ್ಪಂದನೆ ಇಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತುಂಬ ವಿಶ್ವಾಸವಿದೆ. ಬೇಂದ್ರೆ ಅವರ ಹೆಸರು ನಾಡಿನಾದ್ಯಂತ ಶಾಶ್ವತವಾಗಿ ಬೆಳಗಲು ಅಧಿವೇಶನದಲ್ಲಿ ಎರಡು ಬೇಡಿಕೆ ಈಡೇರಿಸುವ ಮೂಲಕ ಬೇಂದ್ರೆ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಬೇಕೆಂದು ಎಂದು ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಆಗ್ರಹಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಚಳಿಗಾಲದ ಅಧಿವೇಶನ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ತೀವ್ರ ಅನುದಾನ ಕೊರತೆ ಹಾಗೂ ಪ್ರೋತ್ಸಾಹವಿಲ್ಲದೇ ಸೊರಗುತ್ತಿರುವ ದ.ರಾ. ಬೇಂದ್ರೆ ಅವರ ಟ್ರಸ್ಟ್‌ಗೆ ಸೂಕ್ತ ಅನುದಾನ ಹಾಗೂ ಬೇಂದ್ರೆ ಹೆಸರಿನಲ್ಲಿ ವಿಶ್ವಕವಿ ದಿನ ಆಚರಣೆ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.

Share this article