- ಪ್ರಚಾರ ಸಭೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ವಾಗ್ದಾಳಿ
ಕನ್ನಡಪ್ರಭ ವಾರ್ತೆ ಜಗಳೂರು
ಪದವೀಧರ ಕ್ಷೇತ್ರದ ಪ್ರತಿನಿಧಿ ಆಗುವುದೆಂದರೆ ಕೇವಲ ಅಧಿಕಾರ ಅನುಭವಿಸುವುದಲ್ಲ. ಬದಲಾಗಿ ಬುದ್ಧಿಜೀವಿಗಳು ಹಾಗೂ ಪದವೀಧರರ ಸಮಸ್ಯೆಗಳಿಗೆ ಶಾಸನ ಸಭೆಯಲ್ಲಿ ಪ್ರಬಲ ಧ್ವನಿಯಾಗಬೇಕು. ಆದರೆ ಜೆಡಿಎಸ್ ಎರಡು ಬಾರಿ ಹಾಗೂ ಬಿಜೆಪಿ ಎಂಟು ಬಾರಿ ಈ ಕ್ಷೇತ್ರದಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿದ್ದರೂ, ಪದವೀಧರರಿಗೆ ಮತ್ತು ಶಿಕ್ಷಕರಿಗೆ ಯಾವುದೇ ರೀತಿಯ ಪ್ರಯೋಜನ ಮಾಡಿಕೊಟ್ಟಿಲ್ಲ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಆರೋಪಿಸಿದರು.ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜನಪ್ರತಿನಿಧಿಗಳಾಗಿ ಆಯ್ಕೆಯಾದ ನಾಯಕರು ತಮ್ಮ 6 ವರ್ಷಗಳ ಅಧಿಕಾರದ ಅವಧಿಯಲ್ಲಿ ಪದವೀಧರ ಕ್ಷೇತ್ರವನ್ನು ಅನಾಥಗೊಳಿಸಿದ್ದಾರೆ. ಕೇವಲ ರಿಯಲ್ ಎಸ್ಟೇಟ್ ಮತ್ತು ಸ್ವಂತ ದೊಡ್ಡ ಸಂಸ್ಥೆಗಳನ್ನು ಕಟ್ಟುಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ಹಿಂದೆ ಆಯ್ಕೆಯಾದವರು "2 ಕೋಟಿ ಅನುದಾನದಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ? " ಎಂದು ಪ್ರಶ್ನಿಸುವ ಮೂಲಕ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ ಎಂದು ಟೀಕಿಸಿದರು.
ಶಾಸಕ ಬಿ.ದೇವೇಂದ್ರಪ್ಪ, "ಯುವಕರ ಕಣ್ಮಣಿ ಶಶಿ ಹುಲಿಕುಂಟೆಮಠ್ ಅವರ ಗೆಲುವು ನಿಶ್ಚಿತ. ಇದು ಅಶ್ವಮೇಧ ಯಾಗದ ಕುದುರೆ ಇದ್ದಂತೆ. ಧಮ್ ಇದ್ದರೆ ಯುದ್ಧ ಮಾಡಿ, ಇಲ್ಲವೇ ಕಪ್ಪ ಕಾಣಿಕೆ ಸಲ್ಲಿಸಿ " ಎಂದು ವಿಪಕ್ಷಗಳಿಗೆ ಸವಾಲು ಹಾಕಿದರು.
ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ ಗೌಡ, ಷಂಷೀರ್ ಅಹಮದ್, ತಿಪ್ಪೇಸ್ವಾಮಿ, ಪ್ರವೀಣ್ ಪಾಟೀಲ್, ಸಿ.ತಿಪ್ಪೇಸ್ವಾಮಿ, ಬಿ. ಮಹೇಶ್ವರಪ್ಪ ಸೇರಿದಂತೆ ಅನೇಕ ಹಿರಿಯ ಮುಖಂಡರು ಇದ್ದರು.
-10ಜೆಎಲ್‍ಆರ್‍ಚಿತ್ರ1ಎ: