ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಯತ್ನ

KannadaprabhaNewsNetwork |  
Published : Mar 07, 2024, 01:45 AM IST
ಬಿಜೆಪಿ ಪ್ರತಿಭಟನೆ | Kannada Prabha

ಸಾರಾಂಶ

ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬರುತ್ತಿದ್ದ ಬಜರಂಗದಳ ಮುಖಂಡ ಪುತ್ತೂರಿನ ಮುರಳಿಕೃಷ್ಣ ಹಸಂತಡ್ಕ ಅವರನ್ನು ಪೊಲೀಸರು ತಡೆದ ಕ್ರಮ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬರುತ್ತಿದ್ದ ಬಜರಂಗದಳ ಮುಖಂಡ ಪುತ್ತೂರಿನ ಮುರಳಿಕೃಷ್ಣ ಹಸಂತಡ್ಕಅವರನ್ನು ಪೊಲೀಸರು ತಡೆದ ಕ್ರಮ ಖಂಡಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ್ದಾರೆ.

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇರಿದಂತೆ ಬಿಜೆಪಿಯ ಮುಖಂಡರು ಭಾಗವಹಿಸಿದ್ದ ಈ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಪುತ್ತೂರಿನಿಂದ ಆಗಮಿಸುತ್ತಿದ್ದ ಬಜರಂಗದಳ ರಾಜ್ಯ ಸಹ ಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಅವರನ್ನು ಪೊಲೀಸರು ಕುಣಿಗಲ್ ಬಳಿ ತಡೆದಿದ್ದರು. ಸಕಾರಣವಿಲ್ಲದೆ ಮುರಳಿಕೃಷ್ಣರನ್ನು ತಡೆದ ಕ್ರಮ ಖಂಡಿಸಿ ಪ್ರತಿಭಟನಾಕಾರರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಜರಂಗದಳದ ಮುಖಂಡ ಮುರಳಿಕೃಷ್ಣರನ್ನು ಪೊಲೀಸರು ತಡೆದ ಕ್ರಮ ಖಂಡನೀಯ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ವಿಧಾನಸೌಧದ ಒಳಗೆ ಬಿಡುತ್ತಾರೆ. ಅವರನ್ನು ಬಂಧಿಸಲು ಮೀನಮೇಷ ಎಣಿಸುವ ಪೊಲೀಸರು, ಮುರಳಿಕೃಷ್ಣರನ್ನು ತಡೆದು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.ದೇಶ ವಿರೋಧಿಗಳಿಗೆ ಸರ್ಕಾರ ಮೃದುಧೋರಣೆ ತಳೆದಿದೆ. ವೋಟಿನ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನವರು ದೇಶದ್ರೋಹಿ ಗಳಿಗೆ ಕುಮ್ಮಕ್ಕು ನೀಡುತ್ತಾ ರಾಜ್ಯವನ್ನು ಭಯೋತ್ಪಾದಕರ ತಾಣ ಮಾಡಲು ಹೊರಟಿದ್ದಾರೆ. ಇದೇ ಕಾರಣಕ್ಕೆ ಬಾಂಬ್ ಬ್ಲಾಸ್ಟ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ಇದು ಭಾರತೀಯ ಜನತಾ ಪಕ್ಷದ ಸಭೆಯಲ್ಲ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ದೇಶದ್ರೋಹಿ ಚಟುವಟಿಕೆಗಳನ್ನು ಖಂಡಿಸಿ ಸಮಾನ ಮನಸ್ಕರು ಅಯೋಜಿಸಿರುವ ಸಭೆ. ಹಿಂದೂ ಕಾರ್ಯಕರ್ತ ಮುರಳೀಕೃಷ್ಣ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು. ಅವರು ಜಿಲ್ಲೆಗೆ ಪ್ರವೇಶಿಸುತ್ತಿದಂತೆ ವಶಕ್ಕೆ ಪಡೆಯಲಾಗಿದೆ. ಆವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ, ಆದರೂ ವಿನಾಕಾರಣ ಬಂಧಿಸಿ ಸಭೆಗೆ ಬಾರದಂತೆ ತಡೆದಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಸರ್ಕಾರದ ಹಿಂದೂ ವಿರೋಧಿ ಧೋರಣೆ ಸಂವಿಧಾನ, ಪ್ರಜಾಪ್ರಭುತ್ವದ ಆಶಯಗಳಿಗೆ ಮಾಡುತ್ತಿರುವ ಅಪಚಾರ. ಅಂಬೇಡ್ಕರ್‌ ಆಶಯಗಳಿಗೆ ವಿರೋಧಿಯಾಗಿದೆ ಎಂದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದರೆ, ರಾಜ್ಯರೈತ ಮೋರ್ಚಾಉಪಾಧ್ಯಕ್ಷ ಬ್ಯಾಟರಂಗೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರದ ಜೊತೆಗೆ ದೇಶವಿದ್ರೋಹಿ ಚಟುವಟಿಕೆಗಳು ನಡೆಯುತ್ತಿವೆ. ನಿಯಂತ್ರಿಸಬೇಕಾದ ಸರ್ಕಾರ ಒಂದು ಕೋಮಿನ ಮತ ಓಲೈಕೆಗಾಗಿ ಅಂತಹವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದರು.

ಮುಖಂಡರಾದ ಎಸ್.ಶಿವಪ್ರಸಾದ್, ವೈ.ಎಚ್.ಹುಚ್ಚಯ್ಯ, ಎಚ್.ಎನ್.ಚಂದ್ರಶೇಖರ್, ಎಚ್.ಟಿ.ಭೈರಪ್ಪ, ಭೈರಣ್ಣ, ಜಿ.ಕೆ.ಶ್ರೀನಿವಾಸ್, ಟಿ.ಆರ್. ಸದಾಶಿವಯ್ಯ, ರುದ್ರೇಶ್, ಹನುಮಂತರಾಜು, ನವಚೇತನ್, ಎಚ್.ಎಂ.ರವೀಶಯ್ಯ, ಸಂದೀಪ್‌ಗೌಡ, ಜಗದೀಶ್, ಬೆಳ್ಳಿ ಲೋಕೇಶ್, ಬಾವಿಕಟ್ಟೆ ನಾಗಣ್ಣ, ಸಿ.ಎನ್.ರಮೇಶ್, ವಿಷ್ಣುವರ್ಧನ್, ಸತ್ಯಮಂಗಲ ಜಗದೀಶ್, ಗಣೇಶ್, ಲತಾ ಬಾಬು, ಶಕುಂತಲಾ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಭಯೋತ್ಪಾದನಾ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ರೈತ, ಬೆಂಗಳೂರು ಸಂಸ್ಥೆಗೆ ಮೋದಿ ಭೇಷ್‌
ಹಳ್ಳಿಯ ಜನರು ಅಡುಗೆಗೆ ಸೌದೆ ಬಳಸಿ - ನಗರ ಜನರು ಎಲೆಕ್ಟ್ರಿಕ್‌ ಸ್ಟವ್ ಉಪಯೋಗಿಸಿ : ಮುನಿಯಪ್ಪ