ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಎಸ್. ಬಾಲರಾಜು ಏ. ೩ ರಂದು ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರದ ಚುನಾವಣಾ ಪ್ರಭಾರಿ ಎನ್.ವಿ. ಫಣೀಶ್ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ ೧೨ ಗಂಟೆಗೆ ನಗರ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಈ ವೇಳೆ ಸಂಸದ ವಿ.ಶ್ರೀನಿವಾಸಪ್ರಸಾದ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಎ.ನಾರಾಯಣಸ್ವಾಮಿ, ಅರವಿಂದಲಿಂಬಾವಳಿ, ಜೆಡಿಸ್‌ನ ಶಾಸಕರಾದ ಜಿ.ಟಿ.ದೇವೇಗೌಡ, ಎಂ.ಆರ್.ಮಂಜುನಾಥ್, ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಚಾಮರಾಜ ಒಡೆಯರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಮತ್ತೆ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಆಸೆಯನ್ನು ದೇಶದ ಜನರಿಂದ ವ್ಯಕ್ತವಾಗುತ್ತಿದೆ. ಜೊತೆಗೆ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದು ಎನ್‌ಡಿಎ ಮೈತ್ರಿಕೂಟಕ್ಕೆ ಇನ್ನು ಹೆಚ್ಚಿನ ಲಾಭವಾಗಲಿದೆ. ಗೆಲುವಿನ ಅಂತರ ಹೆಚ್ಚಾಗಲಿದೆ. ಎಸ್. ಬಾಲರಾಜು ಸಜ್ಜನ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದು, ಕಳೆದ ೨೦ ವರ್ಷಗಳಿಂದ ಕ್ಷೇತ್ರದ ಜನರ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಅವರಿಗೆ ಜನ ಸಾಮಾನ್ಯರೊಂದಿಗೆ ಬೆರತು ಕೆಲಸ ಮಾಡಿದ್ದಾರೆ. ಎಲ್ಲರಿಗೂ ಚಿರಪರಿಚಿತರಾದ ಎಸ್. ಬಾಲರಾಜು ಅವರಿಗೆ ಮತದಾರರ ಒಲವು ಹೆಚ್ಚಾಗಿದೆ ಎಂದು ತಿಳಿಸಿದರು. ದಲಿತರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಬೇಕು :ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಹುಸಂಖ್ಯಾತ ಮತದಾರರು ದಲಿತರಿದ್ದಾರೆ. ೭ ಲಕ್ಷಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಮತದಾರರಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿಯಾಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಕಳೆದ ೭೦ ವರ್ಷಗಳಿಂದ ದಲಿತರಿಗೆ ಅನ್ಯಾಯ ಮಾಡಿಕೊಂಡು ಬರುತ್ತಿದೆ. ದಲಿತರ ಸ್ವಾಭಿಮಾನಿ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನವನ್ನು ದಲಿತ ಸಮುದಾಯ ಇನ್ನು ಮರೆತಿಲ್ಲ. ಅವರು ಇರುವವರಿಗೆ ಸಂಸತ್ ಬರಲು ಕಾಂಗ್ರೆಸ್ ಬಿಡಲಿಲ್ಲ. ತಾವು ಬರೆದ ಸಂವಿಧಾನದಡಿಯಲ್ಲಿ ಕಾಯಿದೆಗಳು ಜಾರಿಯಾಗುವ ಜಾಗದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇರಬೇಕೆಂಬ ಆಸೆಯನ್ನು ಕಾಂಗ್ರೆಸ್ ಸೋಲಿಸುವ ಮೂಲಕ ಮಣ್ಣು ಪಾಲು ಮಾಡಿತ್ತು. ಅವರ ಮರಣದ ನಂತರವು ಸಹ ಅವರ ಶವ ಸಂಸ್ಕಾರ ಮಾಡಲು ದೆಹಲಿಯಲ್ಲಿ ಜಾಗ ನೀಡಲಿಲ್ಲ. ಅವರನ್ನು ದೆಹಲಿಯಿಂದ ಮುಂಬೈಗೆ ಹೋಗುವಂತೆ ಮಾಡಿದರು. ಆದರೆ, ಬಿಜೆಪಿ ಅವರಿಗೆ ಭಾರತ ನೀಡುವ ಜೊತೆಗೆ ಅವರ ಹುಟ್ಟಿದ ಗ್ರಾಮ, ಬೆಳೆದ ಊರು, ಶಾಲೆ, ಕರ್ತವ್ಯ ನಿರ್ವಹಿಸಿದ ಸ್ಥಳ, ಓದಿದ ಜಾಗ ಹಾಗೂ ಅವರ ಪುಣ್ಯಭೂಮಿಯನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ. ಈಗ ಸಿದ್ದರಾಮಯ್ಯ ಎಸ್‌ಇಪಿ, ಟಿಎಸ್‌ಪಿ ಯೋಜನೆಯ ೨೬ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇಂಥ ಅನ್ಯಾಯ ಮಾಡಿರುವ ಕಾಂಗ್ರೆಸ್ ಮತ್ತೇ ದಲಿತರು ಮತ ಹಾಕಬೇಕಾ ಎಂದು ಮಹೇಶ್ ಪ್ರಶ್ನೆ ಮಾಡಿದರು. ಈ ವೇಳೆ ಸುದ್ದಿಗೋಷ್ಟಿಯಲ್ಲಿ ಕ್ಷೇತ್ರದ ಚುನಾವಣಾ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರ ಎನ್. ಮಂಜುನಾಥ್, ಮಾಧ್ಯಮ ಪ್ರಮುಖ್ ವೀರೇಂದ್ರ ಇದ್ದರು.