ಕುರುಗೋಡು: ಸಂಡೂರಿನ ಕಾಂಗ್ರೆಸ್ ಅಸಮಾಧಾನದ ಪ್ರತಿಫಲದಿಂದಾಗಿ ಬಿಜೆಪಿ ಗೆಲುವು ಖಚಿತವಾಗಿದೆ ಎಂದು ಬೆ೦ಗಳೂರು ಕೆ.ಆರ್.ಪುರಂ ಕ್ಷೇತ್ರದ ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಭೈರತಿ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದರು.
ಕುರುಗೋಡು ತಾಲೂಕಿನ ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ಸಂಡೂರು ಕ್ಷೇತ್ರದ ಜನರು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಮತದಾರರು ಬದಲಾವಣೆ ಬಯಸಿದ್ದು, ಸಂಡೂರಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲ್ಲಲಿದೆ ಎಂದರು.ಸಂಡೂರು ಕ್ಷೇತ್ರದಲ್ಲಿ ಗೆದ್ದು ಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿ ಸಚಿವ ಸಂತೋಷ್ ಲಾಡ್ ತೇಲಾಡುತ್ತಿದ್ದಾರೆ. ಈ ಉಪಚುನಾವಣೆ ಫಲಿತಾಂಶ ತಕ್ಕ ಪಾಠ ಕಲಿಸಲಿದೆ ಎಂದರು.
ಸಂಡೂರು ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಪಕ್ಷದ ಒಳ ಏಟು ಕೂಡ ಆಗುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷ ಎಂದಿಗೂ ಹಗುರವಾಗಿ ನೋಡಲ್ಲ. ಕಾರ್ಯಕರ್ತರರಿಗೆ ಪಕ್ಷದ ಬೇರೆ ಬೇರೆ ಜವಾಬ್ದಾರಿಗಳನ್ನು ನೀಡುತ್ತಾ ಬಂದಿದೆ ಎಂದರು.ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಂತ್ರಿಗಳೂ ನಷ್ಟವಾದ ಸ್ಥಳಗಳಿಗೆ ಭೇಟಿ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ. ಬಿಟ್ಟಿಭಾಗ್ಯಗಳ ಭ್ರಮೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನ.೧೩ರಂದು ಜರುಗುವ ಸಂಡೂರು, ಶಿಗ್ಗಾಂವಿ, ಚೆನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸುಮಾರು 30 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಹಾಲುಮತ ಸಮಾಜದವರ ಮನೆಗಳಿಗೆ ಭೈರತಿ ಬಸವರಾಜ ಭೇಟಿ ನೀಡಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು.
ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಸಂಡೂರು ತಾಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ಕೆ. ಅಂಬಣ್ಣ, ಮುಖ೦ಡರಾದ ಶ೦ಕರದಾಸ್, ಚಾನಾಳ್ ಶೇಖರ್, ಐಯ್ಯಾಳಿ ತಿಮ್ಮಪ್ಪ, ಡಿ.ಹೇಮಚಂದ್ರ ದಾಸ್, ಜೀವೇಶ್ವರಿ ರಾಮಕೃಷ್ಣ, ಹಂಪಿ ರಮಣ, ಕೆ. ನಾಗಪ್ಪ, ಕೆ. ಗೊಂದೆಪ್ಪ, ಮುದ್ದೆ ಹೊನ್ನೂರಪ್ಪ ಸ್ವಾಮಿ, ಪೂಜಾರಿ ಚಿದಾನಂದ, ಹೇಮಯ್ಯಇದ್ದರು.