ಕಾಂಗ್ರೆಸ್‌ ಸರ್ಕಾರ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್

KannadaprabhaNewsNetwork |  
Published : May 22, 2025, 12:46 AM IST
ASHOKA | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯು ‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ’ ಎಂಬ ಶೀರ್ಷಿಕೆ ಅಡಿ ಎಂಟು ಪುಟಗಳ ಆರೋಪ ಪಟ್ಟಿ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯು ‘ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ’ ಎಂಬ ಶೀರ್ಷಿಕೆ ಅಡಿ ಎಂಟು ಪುಟಗಳ ಆರೋಪ ಪಟ್ಟಿ ಬಿಡುಗಡೆ ಮಾಡಿದೆ.

ಬುಧವಾರ ಪಕ್ಷದ ಕಚೇರಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಾಸಕರಾದ ಕೆ.ಗೋಪಾಲಯ್ಯ, ಎಸ್‌.ರಘು, ಸಿ.ಕೆ.ರಾಮಮೂರ್ತಿ, ಮುಖಂಡರಾದ ಎಸ್‌.ಹರೀಶ್‌, ಮಾಳವಿಕಾ ಅವಿನಾಶ್‌, ಸಪ್ತಗಿರಿಗೌಡ ಅವರು ಜಂಟಿಯಾಗಿ ಆರೋಪಪಟ್ಟಿ ಬಿಡುಗಡೆಗೊಳಿಸಿದರು.ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್‌, ಜನರ ಮೇಲೆ ತೆರಿಗೆ ಭಾರ ಹೊರೆಸಿರುವ ಈ ಕಾಂಗ್ರೆಸ್ ಸರ್ಕಾರಕ್ಕೆ ‘ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಎಂಬ ಬಿರುದು ನೀಡುತ್ತಿದ್ದೇವೆ. ಕಾಂಗ್ರೆಸ್‌ ನಾಯಕರು ಜನರ ಸಾವಿನ ಮೇಲೆ ಸಾಧನೆಯ ಸಮಾವೇಶ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನದ ಆರ್ಮಿ ಜನರಲ್‌ ಆಸಿಫ್‌ ಮುನೀರ್‌ಗೆ ಫೀಲ್ಡ್‌ ಮಾರ್ಷಲ್‌ ಬಿರುದು ನೀಡಿದಂತೆಯೇ ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ದಿವಾಳಿ ಮಾಡಲ್‌ ಆಫ್‌ ಕರ್ನಾಟಕʼ ಎಂಬ ಬಿರುದು ನೀಡುತ್ತಿದ್ದೇವೆ. ಜನರು ತೆರಿಗೆ ಭಾರ ಹೊತ್ತಿರುವಾಗ ಕಾಂಗ್ರೆಸ್‌ ಸಮಾವೇಶ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯಾಗಿದೆ. ಮುಡಾದಲ್ಲಿ 14 ಸೈಟುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಸತ್ತಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಕ್ಕೆ ಸಮಾವೇಶ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.ವಕ್ಫ್‌ ಮಂಡಳಿಯಿಂದ ರೈತರ ಜಮೀನು, ದೇವಾಲಯದ ಭೂಮಿ ಕಬಳಿಸಲಾಗಿದೆ. ಕೆಪಿಎಸ್‌ಸಿಯಿಂದ ನಡೆದ ಪರೀಕ್ಷೆಯಲ್ಲಾದ ತಪ್ಪಿನಿಂದ 2 ಲಕ್ಷ ಅಭ್ಯರ್ಥಿಗಳ ಜೀವನಕ್ಕೆ ಕೊಡಲಿ ಏಟು ಬಿದ್ದಿದೆ. ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ನಿಂದ ನೇಹಾ ಹತ್ಯೆಯಾಗಿದೆ. ನಾಗಮಂಗಲದಲ್ಲಿ ಕೋಮು ಗಲಭೆ ನಡೆದಾಗ ಗಣೇಶನನ್ನೇ ಜೈಲಿಗೆ ಹಾಕಿದ್ದರು. ಮಳೆ ಬಂದು ಬೆಂಗಳೂರಿನಲ್ಲಿ ಐದು ಜನರು ಮೃತಪಟ್ಟಿದ್ದಾರೆ. ರಾಜಧಾನಿಯನ್ನು ತೇಲುತ್ತಿರುವ ಬೆಂಗಳೂರು ಮಾಡಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಿದ್ದಾರೆ, ಜೊತೆಗೆ ಸುಮಾರು 700 ಕೋಟಿ ರೂ. ಪ್ರೋತ್ಸಾಹಧನವನ್ನೂ ನೀಡಿಲ್ಲ. ಇವೆಲ್ಲ ಸಾಧನೆಗಳಿಗಾಗಿ ಸರ್ಕಾರ ಸಮಾವೇಶ ಮಾಡಿದೆ ಎಂದು ದೂರಿದರು.

ಅವೈಜ್ಞಾನಿಕ ಗ್ಯಾರಂಟಿಗಳಿಗಾಗಿ 60 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ಸಾಲ ಮಾಡಲಾಗಿದೆ. ಈ ನಡುವೆ ವಿದ್ಯುತ್‌ ಶುಲ್ಕ ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಯಾರೂ ಕೇಳುವವರೇ ಇಲ್ಲ. ಗೃಹಸಚಿವರನ್ನು ಪ್ರಶ್ನಿಸಿದರೆ ಇದು ಆಕಸ್ಮಿಕ ಘಟನೆ, ಆರೋಪಿ ಮಾನಸಿಕ ಅಸ್ವಸ್ಥ ಎನ್ನುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಪಾಕಿಸ್ತಾನವನ್ನು ‘ನಮ್ಮ ಪಾಕಿಸ್ತಾನʼ ಎಂದು ಹೇಳುತ್ತಾರೆ. ಭಯೋತ್ಪಾದನಾ ಕೃತ್ಯವನ್ನು ಸಣ್ಣದು ಎಂದು ಹೇಳುತ್ತಾರೆ. ಇಂತಹ ಕಾಂಗ್ರೆಸ್‌ ನಾಯಕರ ಬಂಡವಾಳ ಜನರ ಮುಂದೆ ಬಯಲಾಗಿದೆ ಎಂದು ಅಶೋಕ್ ಹೇಳಿದರು.ಬೆಂಗಳೂರಿನ ಪರಿಹಾರ ಕಾರ್ಯಾಚರಣೆಗೆ ಐದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ವಿಶ್ವಬ್ಯಾಂಕ್‌ನಿಂದ ಹಣ ಪಡೆಯುವ ಪ್ರಸ್ತಾವ ನಮ್ಮ ಅವಧಿಯಲ್ಲೇ ಚರ್ಚೆಯಾಗಿತ್ತು. ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ 25 ಸಾವಿರ ರು.ಗಳಿಂದ ಒಂದು ಲಕ್ಷ ರು.ವರೆಗೆ ಪರಿಹಾರ ನೀಡಲಿ. ಕೇವಲ ಏಳೆಂಟು ಸಾವಿರ ರು. ಪರಿಹಾರ ಬೇಕಿಲ್ಲ ಎಂದರು.ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ಹತ್ತು ವರ್ಷ ಕಳೆದಿದೆ. ಮೋದಿ ಸರ್ಕಾರ ರೈಲ್ವೆಗೆ, ಕುಡಿಯುವ ನೀರಿಗೆ, ಹೆದ್ದಾರಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ನಾವು ತಿಳಿಸುತ್ತೇವೆ. ಮನಮೋಹನ್‌ ಸಿಂಗ್‌ ಎಷ್ಟು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಲಿ. ತೆರಿಗೆ ಪಾವತಿಸುವುದು ಮಾನದಂಡ ಆಗುವುದಿಲ್ಲ. ಮೈಸೂರಿನ ಜನರು, ಬೆಂಗಳೂರಿನ ಜನರು ‘ನಮ್ಮ ತೆರಿಗೆ ನಮ್ಮ ಹಕ್ಕುʼ ಎಂದರೆ ಏನು ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!