ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಬಿಜೆಪಿ ಬದ್ಧ: ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Jun 29, 2026, 02:00 AM IST
ಹುಬ್ಬಳ್ಳಿ ಶ್ರೀನಿವಾಸ ಗಾರ್ಡನ್‌ನಲ್ಲಿ ಕುರುಬ ಸಮಾಜ ಅಭಿವೃದ್ಧಿ ವೇದಿಕೆ ಧಾರವಾಡ ಜಿಲ್ಲಾ ಘಟಕದಿಂದ ಈಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರೊ. ಮಾ. ನಾಗರಾಜ ಅಭಿನಂದನಾ ಸಮಾರಂಭ ನೆರವೇರಿತು. | Kannada Prabha

ಸಾರಾಂಶ

ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಬಿಜೆಪಿ ಸ್ಪಷ್ಟ ನಿಲುವಾಗಿದೆ. ಡಾ. ಮಾ. ನಾಗರಾಜ್ ಅವರ ರಾಜ್ಯಸಭೆ ಆಯ್ಕೆಯೂ ಇದೇ ಚಿಂತನೆಯ ಭಾಗವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದು ಬಿಜೆಪಿ ಸ್ಪಷ್ಟ ನಿಲುವಾಗಿದೆ. ಡಾ. ಮಾ. ನಾಗರಾಜ್ ಅವರ ರಾಜ್ಯಸಭೆ ಆಯ್ಕೆಯೂ ಇದೇ ಚಿಂತನೆಯ ಭಾಗವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಕುಸುಗಲ್ಲ ರಸ್ತೆಯಲ್ಲಿರುವ ಶ್ರೀನಿವಾಸ ಗಾರ್ಡನ್‌ನಲ್ಲಿ ಭಾನುವಾರ ಕುರುಬ ಸಮಾಜ ಅಭಿವೃದ್ಧಿ ವೇದಿಕೆ ಧಾರವಾಡ ಜಿಲ್ಲಾ ಘಟಕದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರೊ. ಮಾ. ನಾಗರಾಜ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂ‍ಭವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಮೇಲ್ವರ್ಗದವರ ಪಕ್ಷ ಎಂಬ ಅಪಪ್ರಚಾರ ಸತ್ಯಕ್ಕೆ ದೂರವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ 47 ಮಂದಿ ಹಿಂದುಳಿದ ವರ್ಗದ ಸಚಿವರಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಒಬಿಸಿ ಸಮುದಾಯದ ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿದ್ದು, ಪಕ್ಷದಲ್ಲಿ ನೂರಾರು ಹಿಂದುಳಿದ ವರ್ಗದ ಶಾಸಕರು ಮತ್ತು ಸಂಸದರಿದ್ದಾರೆ ಎಂದರು.

ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಕುರಿತು ಕೇಂದ್ರ ಸರ್ಕಾರದಲ್ಲಿ ಪ್ರಕ್ರಿಯೆ ಮುಂದುವರಿದಿದೆ. ಪ್ರಸ್ತುತ ಜನಗಣತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೆಲವು ಆಡಳಿತಾತ್ಮಕ ಮಿತಿಗಳಿವೆ. ಜನಗಣತಿ ಪೂರ್ಣಗೊಂಡ ನಂತರ ಈ ವಿಷಯವನ್ನು ಮತ್ತಷ್ಟು ವೇಗವಾಗಿ ಮುಂದುವರಿಸಿ, ತಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ, ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿರ್ಣಾಯಕ ಪಾತ್ರ ವಹಿಸುವಂತೆ ಮನವಿ ಮಾಡಿದರು.

ಹುಳಿ ಹಿಂಡುವವರಿಂದ ದೂರವಿರಿ

ಕುರುಬ ಸಮಾಜ ಹಾಲಿನಂತೆ ಪರಿಶುದ್ಧವಾಗಿದ್ದು, ಸಮಾಜದಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಲು ಕೆಲವರು ಹುಳಿ ಹಿಂಡಲು ಪ್ರಯತ್ನಿಸುತ್ತಾರೆ. ಅಂತಹವರ ಪ್ರಚೋದನೆಗಳಿಗೆ ಯಾರೂ ಕಿವಿಗೊಡಬಾರದು. ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಸಾಗುವಂತೆ ಕರೆ ನೀಡಿದ ಶ್ರೀಗಳು, ನಮಗೆ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಅಥವಾ ಬೇರೆ ಯಾವುದೇ ವಿಶೇಷ ಸೌಲಭ್ಯಗಳ ಅಗತ್ಯವಿಲ್ಲ. ಅಖಂಡ ಕರ್ನಾಟಕದ ಕುರುಬ ಸಮಾಜಕ್ಕೆ ಎಸ್‌ಟಿ ಸ್ಥಾನಮಾನ ದೊರಕಿಸಿಕೊಡುವುದೇ ನಮ್ಮ ಗುರಿಯಾಗಿದೆ ಎಂದರು.

ಸಮರ್ಪಕ ಪ್ರತಿನಿಧಿತ್ವ

ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯದಲ್ಲೇ ಅತಿದೊಡ್ಡ ಸಮುದಾಯವಾಗಿರುವ ಕುರುಬ ಸಮಾಜಕ್ಕೆ ಇಂದು ಸಮರ್ಪಕ ಪ್ರತಿನಿಧಿತ್ವ ದೊರೆತಿದೆ. ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಸಮಾಜದಲ್ಲಿ ಉಂಟಾಗಿದ್ದ ಬೇಸರವನ್ನು ಈ ರಾಜ್ಯಸಭೆ ಆಯ್ಕೆ ದೂರ ಮಾಡಿದೆ ಎಂದರು.

2028ಕ್ಕೆ ಬಿಜೆಪಿ ಅಧಿಕಾರಕ್ಕೆ

ಮಾಜಿ ಸಚಿವ, ಶಾಸಕ ಬೈರತಿ ಬಸವರಾಜ ಮಾತನಾಡಿ, 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕುರುಬ ಸಮಾಜ ರಾಜ್ಯದ ಪ್ರಮುಖ ಸಮುದಾಯವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕುರುಬ ಸಮಾಜದ ಮುಖಂಡರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಪಕ್ಷದ ನಾಯಕರಿಗೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಾಸಕ ಎಂ.ಆರ್‌. ಪಾಟೀಲ, ವಿಪ ಮಾಜಿ ಸಭಾಪತಿ ರಘುನಾಥರಾವ್‌ ಮಲ್ಕಾಪುರೆ, ವೇದಿಕೆಯ ಕಾರ್ಯಾಧ್ಯಕ್ಷ, ಪ್ರತಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಪರಶುರಾಮ ದಿವಾನರ ಮಾತನಾಡಿದರು.

ಈ ವೇಳೆ ಹಾಲುಮತ ಸಮಾಜದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ರಾಜು ಕಾಳೆ, ಮೇನಕಾ ಹುರಳಿ, ಮಂಜುನಾಥ ಮಕ್ಕಳಗೇರಿ, ರಾಜೇಶ್ವರಿ ಸಾಲಗಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ