ಹಾವೇರಿ: ಹಾವೇರಿ ಮೆಡಿಕಲ್‌ ಕಾಲೇಜಿನ ಬೋಧನಾ ಆಸ್ಪತ್ರೆಯೂ ಆಗಿರುವ ಜಿಲ್ಲಾಸ್ಪತ್ರೆಯಲ್ಲಿ ಇರುವುದು ಒಂದೇ ಆ್ಯಂಬುಲೆನ್ಸ್‌ ಎಂದರೆ ನಂಬಲೇಬೇಕು. ನಿತ್ಯ ಸಾವಿರಾರು ರೋಗಿಗಳು ಬರುವ ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕರೆತರಲು, ಹೆಚ್ಚಿನ ಚಿಕಿತ್ಸೆಗೆ ಒಯ್ಯಲು ಆ್ಯಂಬುಲೆನ್ಸ್‌ ಇಲ್ಲದೇ ಬಡವರು ಪರದಾಡುವಂತಾಗಿದೆ.

ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಒಂದು ಆ್ಯಂಬುಲೆನ್ಸ್, 108 ಯೋಜನೆಯಡಿ ಎರಡು ವಾಹನಗಳಿವೆ. ಜಿಲ್ಲೆಯ ಎಂಟು ತಾಲೂಕುಗಳಿಂದ ಜಿಲ್ಲಾಸ್ಪತ್ರೆಗೆ ನಿತ್ಯವೂ ಸಾವಿರಾರು ರೋಗಿಗಳು ಬರುತ್ತಾರೆ. ಹಾವು ಕಡಿತ, ರಸ್ತೆ ಅಪಘಾತ, ವಿಷ ಸೇವನೆ, ಗಂಭೀರ ಆರೋಗ್ಯ ಸಮಸ್ಯೆ ಒಳಗಾದ ನೂರಾರು ರೋಗಿಗಳು ನಿತ್ಯವೂ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಬರುತ್ತಾರೆ. ಹಳ್ಳಿಗಳು, ಹೋಬಳಿ, ತಾಲೂಕು ಸ್ಥಳದಿಂದ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಇಲ್ಲಿಂದ ಹುಬ್ಬಳ್ಳಿಯ ಕಿಮ್ಸ್, ಇತರ ಆಸ್ಪತ್ರೆಗಳಿಗೆ ತೆರಳುತ್ತಾರೆ.

ಆದರೆ, ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದೇ ಆ್ಯಂಬುಲೆನ್ಸ್ ಇದೆ. ಇರುವ ಒಂದು ಆ್ಯಂಬುಲೆನ್ಸ್‌ಗೂ ಹಾವೇರಿಯಿಂದ ಹುಬ್ಬಳ್ಳಿಗೆ ತೆರಳಲು ₹2,500 ಡೀಸೆಲ್ ಶುಲ್ಕ ಪಡೆಯಲಾಗುತ್ತದೆ. ಎರಡು 108 ಉಚಿತ ಆ್ಯಂಬುಲೆನ್ಸ್‌ಗಳು ಮಾತ್ರ ಇದ್ದು, ಬಹುತೇಕ ಇವು ಸದಾ ಬ್ಯುಸಿ ಇರುತ್ತವೆ. ಇದೇ ಬೇಕಾದರೆ ರೋಗಿಗಳು ತಾಸುಗಟ್ಟಲೇ ಕಾಯಬೇಕಿದೆ.

ಜಿಲ್ಲಾಸ್ಪತ್ರೆಗೆ ಬಹುತೇಕ ಕಡು ಬಡವರು, ಕಾರ್ಮಿಕರು, ಕೂಲಿಕಾರರು, ಮಧ್ಯಮ ವರ್ಗದವರು ಬರುತ್ತಾರೆ. ಇಂತಹ ಸಂದರ್ಭದಲ್ಲಿ ಸಕಾಲಕ್ಕೆ ಆ್ಯಂಬುಲೆನ್ಸ್ ಸೌಲಭ್ಯ ದೊರೆಯುತ್ತಿಲ್ಲ. ಖಾಸಗಿ ಆ್ಯಂಬುಲೆನ್ಸ್‌ನವರು ಹೆಚ್ಚಿನ ಬಾಡಿಗೆ ಹೇಳುತ್ತಾರೆ ಎಂಬ ಆರೋಪಗಳಿವೆ.

ಅಲ್ಪಸಂಖ್ಯಾತರ ಇಲಾಖೆಯಿಂದ ಅಂಜುಮನ್ ಸಂಸ್ಥೆಗೆ ಒಂದು ಆ್ಯಂಬುಲೆನ್ಸ್ ನೀಡಲಾಗಿದೆ. ಇದಕ್ಕೂ ಶುಲ್ಕ ವಿಧಿಸಲಾಗುತ್ತದೆ. ವಕ್ಫ್ ಬೋರ್ಡ್‌ನಿಂದ ನಿರ್ವಹಣೆ ವೆಚ್ಚ ನೀಡುವುದಿಲ್ಲ. ಹಾಗಾಗಿ, ರೋಗಿಗಳಿಂದಲೇ ಡೀಸೆಲ್ ವೆಚ್ಚ, ಚಾಲಕನ ಶುಲ್ಕ ಪಡೆದು ನಿರ್ವಹಣೆ ಮಾಡಲಾಗುತ್ತಿದೆ ಎಂದು ಅಂಜುಮನ್ ಸಂಸ್ಥೆಯವರು ಹೇಳುತ್ತಾರೆ.


ಆ್ಯಂಬುಲೆನ್ಸ್ ಸಮಸ್ಯೆಯಿಂದ ಜಿಲ್ಲೆಯ ಬಡ ರೋಗಿಗಳು ಹಾಗೂ ಅವರ ಕುಟುಂಬದವರು ರೋಸಿ ಹೋಗಿದ್ದಾರೆ. ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದಾಗಿ ಹೇಳುವ ಸರ್ಕಾರಗಳು, ಕನಿಷ್ಠ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ಜಿಲ್ಲಾಸ್ಪತ್ರೆಗೆ ಹೆಚ್ಚುವರಿಯಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರಿಂದ ಆಗ್ರಹ ಕೇಳಿ ಬಂದಿದೆ.

ಖಾಸಗಿ ಆ್ಯಂಬುಲೆನ್ಸ್ ದರ್ಬಾರ್‌: ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಎದುರು ಕಾಗಿನೆಲೆ ರಸ್ತೆಬದಿಯಲ್ಲಿ ಖಾಸಗಿ ಆ್ಯಂಬುಲೆನ್ಸ್‌ಗಳು ಸರತಿಯಲ್ಲಿ ನಿಂತಿರುತ್ತವೆ. ಜಿಲ್ಲಾಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಸೌಲಭ್ಯದ ಕೊರತೆ ಇರುವುದು ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಿದೆ. ಖಾಸಗಿ ಆ್ಯಂಬುಲೆನ್ಸ್‌ಗಳ ಚಾಲಕರು ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಹಾವೇರಿಯಿಂದ ಹುಬ್ಬಳ್ಳಿಗೆ ತೆರಳಲು 3ರಿಂದ ಐದಾರು ಸಾವಿರ ರು.ವರೆಗೂ ಬಾಡಿಗೆ ಕೇಳುತ್ತಾರೆ ಎಂದು ರೋಗಿಯೊಬ್ಬರ ಸಂಬಂಧಿ ಆರೋಪಿಸಿದರು.

ಗಮನಕ್ಕೆ ತಂದರೂ ಆಗದ ವ್ಯವಸ್ಥೆ: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ಆ್ಯಂಬುಲೆನ್ಸ್ ಇರುವ ವಿಷಯ ತಿಳಿದು ಹಿಂದಿನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲರು ಅಚ್ಚರಿಯಾಗಿದ್ದರು. ಹೆಚ್ಚುವರಿ ಮೂರು ಆ್ಯಂಬುಲೆನ್ಸ್ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಆದರೂ ಸಮಸ್ಯೆಗೆ ಪರಿಹಾರ ದೊರೆಯದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಇರುವ ಒಂದು ಆ್ಯಂಬುಲೆನ್ಸ್‌ಗೆ ಆರೋಗ್ಯ ರಕ್ಷಾ ಸಮಿತಿ ಸೂಚನೆ ಮೇರೆಗೆ ₹2,500 ಶುಲ್ಕ ವಿಧಿಸಲಾಗುತ್ತಿದೆ. ಹೆಚ್ಚುವರಿ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಹಿಮ್ಸ್ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಅವರಿಗೂ ಕೇಳಿದ್ದೇವೆ. ಶೀಘ್ರದಲ್ಲಿ ವ್ಯವಸ್ಥೆ ಆಗುವ ನಿರೀಕ್ಷೆಯಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ ಹೇಳಿದರು.