ಬ್ಯಾಡಗಿ: ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಆದರೆ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮನುಷ್ಯ ಆರೋಗ್ಯವನ್ನು ಕಡೆಗಣಿಸಿ ಹಣದ ಸಂಪತ್ತಿನ ಹಿಂದೆ ಓಡುತ್ತಿದ್ದಾನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಾಸಾಯನಿಕಯುಕ್ತ ಆಹಾರ, ಜಂಕ್ ಫುಡ್, ವ್ಯಾಯಾಮದ ಕೊರತೆ ಹಾಗೂ ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಹಿಂದೆ ರೋಗವಿಲ್ಲದ ಮನೆಗಳು ಕಂಡುಬರುತ್ತಿದ್ದರೆ, ಇಂದು ಒಂದಲ್ಲೊಂದು ಕಾಯಿಲೆಯಿಂದ ಬಳಲುವ ಕುಟುಂಬಗಳು ಹೆಚ್ಚಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಎಲ್ಲ ಲಸಿಕೆಗಳನ್ನು ಹಾಕಿಸಬೇಕು ಎಂದು ಕರೆ ನೀಡಿದರು.

ಪಲ್ಸ್ ಪೋಲಿಯೋ ಅಭಿಯಾನವು ದೇಶದ ಭವಿಷ್ಯವನ್ನು ಆರೋಗ್ಯವಂತವಾಗಿಡುವ ಮಹತ್ವದ ಕಾರ್ಯಕ್ರಮವಾಗಿದೆ. ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ಈ ನಿಟ್ಟಿನಲ್ಲಿ ಪೋಷಕರು ಯಾವುದೇ ನಿರ್ಲಕ್ಷ್ಯ ತೋರದೆ ತಮ್ಮ ಮಕ್ಕಳಿಗೆ ತಪ್ಪದೇ ಎರಡು ಹನಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಆಡಳಿತ ವೈದ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಮಾತನಾಡಿ, ಭಾರತವು ಹಲವು ವರ್ಷಗಳ ನಿರಂತರ ಪ್ರಯತ್ನದಿಂದ ಪೋಲಿಯೋ ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಇನ್ನೂ ಪೋಲಿಯೋ ಸೋಂಕು ಕಂಡುಬರುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪಲ್ಸ್ ಪೋಲಿಯೋ ಅಭಿಯಾನವನ್ನು ಸರ್ಕಾರ ನಿರಂತರವಾಗಿ ನಡೆಸುತ್ತಿದೆ. ಒಂದೇ ಒಂದು ಮಗುವೂ ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ದಾನಪ್ಪ ಚೂರಿ, ಚನಬಸಪ್ಪ ಹುಲ್ಲತ್ತಿ, ಗಿರೀಶ ಇಂಡಿಮಠ, ಬಸವರಾಜ ಸುಂಕಾಪುರ, ಮಾಲತೇಶ ಅರಳಿಮಟ್ಟಿ, ಮಂಜುನಾಥ ಉಪ್ಪಾರ, ಅನಿಲ್ ಬೊಡ್ಡಪಾಟಿ, ಪ್ರತಿಭಾ ಮೇಲಗಿರಿ, ಪುಷ್ಪಾ ಇಂಡಿಮಠ, ಕವಿತಾ ಸೊಪ್ಪಿನ ಮಠ, ಆಸ್ಪತ್ರೆಯ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆ ಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.