ಸಂವಿಧಾನ ಬದಲಾವಣೆ ಹೇಳಿಕೆಗೆ ಬಿಜೆಪಿ ಖಂಡನೆ

KannadaprabhaNewsNetwork |  
Published : Mar 26, 2025, 01:30 AM IST

ಸಾರಾಂಶ

ಮುಸ್ಲಿಂರಿಗೆ ಕೊಟ್ಟಿರುವ ಮೀಸಲಾತಿ ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ಬದಲಿಸಲೂ ತಯಾರಾಗಿದ್ದೇವೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡಿ ಜಿಲ್ಲಾ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮುಸ್ಲಿಂರಿಗೆ ಕೊಟ್ಟಿರುವ ಮೀಸಲಾತಿ ಉಳಿಸಿಕೊಳ್ಳುವ ಸಲುವಾಗಿ ಸಂವಿಧಾನ ಬದಲಿಸಲೂ ತಯಾರಾಗಿದ್ದೇವೆ ಎಂದು ಹೇಳಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡಿ ಜಿಲ್ಲಾ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಬಿಜಿಎಸ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಸಂವಿಧಾನ ಬದಲಾವಣೆಗೆ ಕೈ ಹಾಕಲಿ ಎಂದು ಬಿಜೆಪಿ ಮುಖಂಡರು ಸವಾಲು ಹಾಕಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 4 ರಷ್ಟು ಮಿಸಲಾತಿ ನೀಡುವ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿದಾಗ್ಯೂ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ಬಿಲ್ ಪಾಸ್ ಮಾಡಿದೆ. ಧರ್ಮ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಮುಸ್ಲಿಮರಿಗೆ ಮೀಸಲಾತಿ ಉಳಿಸಿಕೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು ಖಂಡನೀಯ ಎಂದರು.

ಹೆಸರಿಗೆ ತಾವು ಅಹಿಂದ ನಾಯಕರೆಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ದಲಿತರ ಹಣ, ಅನ್ನಕ್ಕೆ ಕನ್ನ ಹಾಕಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ ಇತರರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಸರ್ಕಾರದ ವಿರುದ್ಧ ಬಿಜೆಪಿ ವಿರೋಧ ಪಕ್ಷವಾಗಿ ಪರಿಣಾಮಕಾರಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿದಿನ ಅಲ್ಪಸಂಖ್ಯಾತರ ತುಷ್ಟೀಕರಣ ನಡವಳಿಕೆಗಳನ್ನೇ ಅನುಸರಿಸಿಕೊಂಡು ಬರುತ್ತಿದೆ. ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಮುಸಲ್ಮಾನರಿಗೆ ಸರ್ಕಾರ ಕಾಮಗಾರಿಯ ಗುತ್ತಿಗೆಯಲ್ಲಿ ಮೀಸಲಾತಿ ನೀಡಿ, ಸಂವಿಧಾನ ವಿರೋಧಿ ಮೀಸಲಾತಿ ಉಳಿಸಿಕೊಳ್ಳಲು ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವುದು ಹೇಯ ಕೃತ್ಯ, ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ, ಸಂವಿಧಾನ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರು.

ಜಿಲ್ಲಾ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಧರ್ಮದ ಆಧಾರದಲ್ಲಿ ಯಾವುದೇ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ. ಮುಸಲ್ಮಾನರಿಗೆ ಮೀಸಲಾತಿ ನೀಡುವ ಸಲುವಾಗಿ ಸಂವಿಧಾನವನ್ನೇ ಬದಲಾವಣೆ ಮಾಡಲು ತಯಾರಿದ್ದೇವೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಉದ್ಧಟತನದ್ದು. ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಕಾಟ ಶುರುವಾಗಿದೆ. ನಿತ್ಯ ಒಂದಲ್ಲೊಂದು ಅವಾಂತರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಮಾಜ ವಿರೋಧಿ ಕೆಲಸ ಮಾಡುವುದು, ದಲಿತರ ಹಣ ಲಪಟಾಯಿಸುವುದರಲ್ಲಿ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ. ಒಂದು ವರ್ಗವನ್ನು ಓಲೈಕೆ ಮಾಡಲು ಸಮಾಜ-ಸಮಾಜಗಳ ಮಧ್ಯೆ ದ್ವೇಷ ತುಂಬುವ ಸಮಾಜ ಕಂಟಕ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ಬಜೆಟ್‌ನಲ್ಲಿ 4 ಸಾವಿರ ಕೋಟಿ ರು. ಅನುದಾನವನ್ನು ಮುಸ್ಲಿಮರಿಗೆ ಮೀಸಲಿಟ್ಟಿದ್ದಾರೆ. ಸಂವಿಧಾನ ಬಾಹಿರವಾಗಿ ಕಾಮಗಾರಿ ಗುತ್ತಿಗೆಯಲ್ಲಿ ಶೇಕಡ 4ರಷ್ಟು ಮೀಸಲಾತಿ ನೀಡಿ ಅವರನ್ನು ಓಲೈಸಲು ಮುಂದಾಗಿದ್ದಾರೆ. ಮುಸಲ್ಮಾನರಿಗಾಗಿ ಸಂವಿಧಾನವನ್ನೇ ಬದಲಾಯಿಸುವುದಾಗಿ ಹೇಳಿರುವ ಕಾಂಗ್ರೆಸ್ ನಾಯಕರ ಧೋರಣೆ ಖಂಡನೀಯ ಎಂದರು.

ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್.ಚಂದ್ರಶೇಖರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎ. ಆಂಜನಪ್ಪ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಕಾರ್ಯದರ್ಶಿ ಎಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಧನುಷ್, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಬಂಬೂ ಮೋಹನ್, ಮಲ್ಲಿಕಾರ್ಜುನ್, ಸಿ.ಎನ್.ರಮೇಶ್, ವಿಷ್ಣುವರ್ಧನ್, ಪುಟ್ಟರಾಜು, ಇಂದ್ರಕುಮಾರ್, ಟಿ.ಆರ್.ಸದಾಶಿವಯ್ಯ, ಸತ್ಯಮಂಗಲ ಜಗದೀಶ್, ನಂಜುಂಡಸ್ವಾಮಿ, ಗಣೇಶ್‌ಪ್ರಸಾದ್, ಆಟೋ ಯಡಿಯೂರಪ್ಪ, ನಿಸರ್ಗ ರಮೇಶ್, ಜೆ.ಜಗದೀಶ್, ಮರಿತಿಮ್ಮಯ್ಯ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ವೆಂಕಟೇಶಾಚಾರ್, ನಂದಿನಾಥ್, ಗೂಳೂರು ಸಿದ್ದರಾಜು ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''