ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆಗೆ ಬಿಜೆಪಿ ಖಂಡನೆ

KannadaprabhaNewsNetwork |  
Published : Jun 21, 2024, 01:11 AM ISTUpdated : Jun 21, 2024, 11:11 AM IST
20ಐಎನ್‌ಡಿ4,ರಾಜ್ಯ ಕಾಂಗ್ರೆಸ್‌ ಸರ್ಕಾರ ಪೆಟ್ರೊಲ್‌,ಡಿಸೇಲ್‌ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಇಂಡಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಬಿಜೆಪಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ, ಆಕ್ರೋಶ

 ಇಂಡಿ : ರಾಜ್ಯ ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌, ಡೀಸೆಲ್‌, ರೈತರ ಬೀಜ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಇಂಡಿ ಮಂಡಲದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾ ಮೆರವಣಿಗೆ ಪಟ್ಟಣದ ಡಾ.ಅಂಬೇಡ್ಕರ್‌ ವೃತ್ತದಿಂದ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುವುದರ ಮೂಲಕ ಹೊರಟು ಬಸವೇಶ್ವರ ವೃತ್ತ ತಲುಪಿ ಅಲ್ಲಿ ಸಭೆಯಾಗಿ ಮಾರ್ಪಟ್ಟಿತ್ತು. ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕೆಲಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಜಿಲ್ಲಾ ಮುಖಂಡ ಹಣಮಂತ್ರಾಯಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಬಾಂಡ್‌ ಪೇಪರ್‌ ಶುಲ್ಕ ಹೆಚ್ಚಳ, ರೈತ ಬಿತ್ತನೆ ಬೀಜದ ದರ ಏರಿಕೆ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿ ಜನವಿರೋಧಿ ಆಡಳಿತ ರಾಜ್ಯದಲ್ಲಿ ಮಾಡುತ್ತಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಸೇರಿದಂತೆ ಹಲವು ವಸ್ತುಗಳ ಬೆಲೆಗಳನ್ನು ಏರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಾಂಗ್ರೆಸ್ಸಿನವರು ಸ್ಕೂಟರ್ ಶವಯಾತ್ರೆ ಮಾಡಿದ್ದರು. ಆದರೆ ಇಂದು ಅವರೇ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸುವುದರ ಮೂಲಕ ನಾವು ಅಂದು ಮಾಡಿದ್ದು ತಪ್ಪು ಎಂದು ಅರ್ಥಕಲ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಿದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದೆ. ಅಬಕಾರಿ ಸುಂಕ ಹೆಚ್ಚಳ, ಆಸ್ತಿ ನೋಂದಣಿ ಶುಲ್ಕ, ಪಹಣಿ ಶುಲ್ಕ, ಜನನ, ಮರಣ ಪ್ರಮಾಣಪತ್ರಗಳ ಶುಲ್ಕ ಹೆಚ್ಚಳ ಮಾಡುವುದರ ಜೊತೆಗೆ ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ಬೀಜದ ದರ ಹೆಚ್ಚಳ ಮಾಡಿ ರೈತ ವಿರೋಧ ನೀತಿ ಅನುಸರಿಸುತ್ತಿದೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವುದರ ಬದಲು ಜನತೆಗೆ ತೊಂದರೆ ನೀಡುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಜನರ ಪಾಲಿಗೆ ಕಾಂಗ್ರೆಸ್ ಶಾಪವಾಗಿದ್ದು, ಏರಿಕೆ ಮಾಡಿರುವ ಎಲ್ಲಾ ಬೆಳೆಗಳನ್ನು ಕೂಡಲೇ ಇಳಿಸಬೇಕು. ಇಲ್ಲದಿದ್ದರೆ ಅಧಿಕಾರದಿಂದ ಇಳಿಯಬೇಕು. ಬೆಲೆ ಇಳಿಸದಿದ್ದರೆ ಮುಂಬರುವ ದಿನಗಳಲ್ಲಿ ರೈತರು ಹಾಗೂ ಸಾರ್ವಜನಿಕರೊಂದಿಗೆ ಕಾಂಗ್ರೆಸ್ ವಿರುದ್ಧ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದ ಜನತೆಯ ಅಗತ್ಯ ವಸ್ತುಗಳು ಸೇರಿದಂತೆ ಒಂದಿಲ್ಲೊಂದು ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ಆಡಳಿತವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಆರನೇ ಗ್ಯಾರಂಟಿಯಾಗಿ ಚಿಪ್ಪು ನೀಡಿದೆ. ಕೂಡಲೇ ಎಲ್ಲಾ ಬೆಲೆಗಳ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು. ರೈತರಿಗೆ ಶೇ.75ರಷ್ಟು ಸಹಾಯಧನದಲ್ಲಿ ಬೀಜ, ಗೊಬ್ಬರ ವಿತರಣೆ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಮಹಾದೇವ ರಜಪೂತ, ರಮೇಶ ರಾಠೋಡ, ಮಂಜು ದೇವರ, ಮಲ್ಲು ದೇವರ, ಶ್ರೀಕಾಂತ ದೇವರ, ರಮೇಶ ಧರೆನವರ, ಶಾಂತು ಕಂಬಾರ, ಮಲ್ಲು ವಾಲೀಕಾರ, ಅಶೋಕ ಅಕಲಾದಿ, ಅಶೋಕಗೌಡ ಬಿರಾದಾರ, ಚಂದ್ರಕಾಂತ ದೇವರ, ಸಂಜು ದಶವಂತ, ಮಲ್ಲು ಗುಡ್ಲ, ರಾಮಸಿಂಗ ಕನ್ನೊಳ್ಳಿ, ವೆಂಕಟೇಶ ಕುಲಕರ್ಣಿ, ಸೋಮು ನಿಂಬರಗಿಮಠ, ದತ್ತಾ ಬಂಡೆನವರ, ಸಚಿನ ಬೊಳೆಗಾಂವ, ಅಣ್ಣು ಮದರಿ, ಮಹಾದೇವ ಗುಡ್ಡೊಡಗಿ, ಪ್ರಶಾಂತ ಗವಳಿ, ಮಹೇಶ ಹೂಗಾರ, ಸುನಂದಾ ಗಿರಣಿವಡ್ಡರ, ವಿಜಯಲಕ್ಷ್ಮಿ ರೂಗಿಮಠ, ಅನಸೂಯಾ ಮದರಿ, ಭೌರಮ್ಮ ನಾವಿ, ಶಾಮಲಾ ಬಗಲಿ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.

ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧವಾಗಿ ಚೊಂಬಿನ ಜಾಹೀರಾತು ಕಾಂಗ್ರೆಸ್ ನೀಡಿತ್ತು. ಈಗ ಜನರ ಕಿವಿಗೆ ಹೂ ಇಡುವುದರ ಮೂಲಕ ಜನರ ಕೈಗೆ ಚಿಪ್ಪು ನೀಡಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ಮಾಡುವುದು ಕಾಂಗ್ರೆಸ್ ಸಿದ್ದಾಂತವಾಗಿದೆ.

-ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ