ತೈಲಬೆಲೆ ಏರಿಕೆ ವಿರೋಧಿಸಿ ಎನ್‌ಡಿಎ ಆಕ್ರೋಶ

KannadaprabhaNewsNetwork | Updated : Jun 21 2024, 11:15 AM IST

ಸಾರಾಂಶ

ರಾಮನಗರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ರಾಮನಗರ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಖಾಲಿ ಕ್ಯಾನ್ ಗಳನ್ನು ಪ್ರದರ್ಶಿಸುತ್ತಾ ಪ್ರತಿಭಟಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿ ಆಗಿದೆ. ಸರ್ಕಾರ ನಡೆಸಲು ಹಣವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ವಿಧಿಸಿದ್ದಾರೆ. ಇದರಿಂದ ಎರಡರ ಬೆಲೆ ಹೆಚ್ಚಾಗಿದ್ದು, ಇತರೆ ವಸ್ತುಗಳ ಬೆಲೆಯ ಹೆಚ್ಚಳಕ್ಕೂ ಕಾರಣ‍ವಾಗಿದೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ ಎಂದು ಟೀಕಿಸಿದರು.

ಲೋಕಸಭೆ ಚುನಾವಣೆ ಮುಗಿಯುವರೆಗೆ ಸುಮ್ಮನಿದ್ದ ರಾಜ್ಯ ಸರ್ಕಾರವು ಚುನಾವಣೆ ಫಲಿತಾಂಶ ನಂತರ ಬೆಲೆ ಹೆಚ್ಚಿಸಿದ ಚುನಾವಣೆಯಲ್ಲಿ ರಾಜ್ಯದ ಮತದಾರರು ರಾಜ್ಯ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಅವರಿಗೆ ವಿರುದ್ಧವಾಗಿ ಮತ ಹಾಕಿದ್ದಾರೆ. ಈ ಸಿಟ್ಟಿನಿಂದ ರಾಜ್ಯ ಸರ್ಕಾರ ಪೆಟ್ರೋಲ್ , ಡೀಸೆಲ್ ಮೇಲೆ ತೆರಿಗೆ ಹಾಕಿದೆ. ಇದು ಮತದಾರರ ವಿರುದ್ಧ ಸೇಡಿನ ಕ್ರಮ ಎಂದು ಆರೋಪಿಸಿದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ ಮಾತನಾಡಿ, ಹಲವಾರು ಭಾಗ್ಯಗಳ ಆಸೆ ಆಮಿಷಗಳನ್ನು ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈಗ ತೈಲ ಬೆಲೆ ಹೆಚ್ಚಿಸುವ ಮೂಲಕ ಇಡೀ ಕರ್ನಾಟಕ ಜನತೆಗೆ ಅದರಲ್ಲೂ ಬಡವರ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ನಾಡಿನ ಜನರಿಗೆ ಚಿಪ್ಪು ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ದಲಿತರ ಪರವಾಗಿದ್ದೇವೆ, ಪರಿಶಿಷ್ಟ ಜಾತಿ, ಪಂಗಡದ ಪರವಾಗಿದ್ದೇವೆ ಎಂದು ಹೇಳುವ ಈ ಸರ್ಕಾರವು ದಲಿತರ ಅಭಿವೃದ್ದಿಗೆ ಮೀಸಲಾದ 25 ಸಾವಿರ ಕೋಟಿ, ಪರಿಶಿಷ್ಟ ಜಾತಿಯವರ 187 ಕೋಟಿ ಹಣವನ್ನು ದುರ್ಬಳಕೆ ಮಾಡಿ ಬೇರೆ ಬೇರೆಯವರ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಹಗಲು ದರೋಡೆ ಮಾಡುತ್ತಿದೆ ಎಂದು ದೂರಿದರು.

ಈಗ ಪೆಟ್ರೋಲ್ - ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯರ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ. ಈ ಕೂಡಲೇ ಸರ್ಕಾರ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ದರ ಏರಿಕೆ ವಾಪಸ್ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ದರ್ಶನ್ ರೆಡ್ಡಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಸ್ .ಆರ್ .ನಾಗರಾಜು, ಜಗನ್ನಾಥ್, ರುದ್ರದೇವರು, ರಾಜು, ಕಾಳಯ್ಯ, ಚನ್ನಪ್ಪ, ಜೆಡಿಎಸ್ ಮುಖಂಡರಾದ ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು. 

Share this article