ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ನಮ್ಮ ಸರ್ಕಾರದ ಮೇಲೆ ನೀವು ಮಾಡಿದ್ದ ಶೇ.40 ಕಮಿಷನ್ ಹಾಗೂ ಈಗ ನಿಮ್ಮ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿರುವ ಶೇ.60 ಕಮಿಷನ್ ಆರೋಪದ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ಕೊಡೋಣವೇ ಸಿದ್ದಣ್ಣ ಎಂದು ವಿಧಾನ ಪರಿಷತ್ತು ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಕ್ತ ಆಹ್ವಾನ ನೀಡಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ಸಭೆಯಲ್ಲಿ ಮಾತನಾಡಿದ ಅವರು, ಜನಾಕ್ರೋಶವು ಬಿಸಿಲಿನಂತೆ ಏರುತ್ತಿದೆ. ಆದರೆ, ಸಿದ್ದರಾಮಯ್ಯ ಹೇಳ್ತಾರೆ, ಜನಾಕ್ರೋಶವೇ ಇಲ್ಲವೆಂದು. ಸಿದ್ದರಾಮಯ್ಯಗೆ ಜನಾಕ್ರೋಶದ ಬಿಸಿ ಗೊತ್ತಾಗುತ್ತಿಲ್ಲವೆಂದರೆ ಬೇಸಿಗೆಯೇ ಬಂದಿಲ್ಲ ಎಂದರ್ಥ. ಹೊರಗೆ ಬಸಪ್ಪ, ಒಳಗೆ ವಿಷಪ್ಪ ಎಂಬಂತೆ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ಪಕ್ಷ ಒಂದು ರೀತಿ ಗಿರವಿ ಅಂಗಡಿ ಇದ್ದಂತೆ. ಬಡವರು ಈ ಅಂಗಡಿಯಲ್ಲಿ ತಮ್ಮ ಆಸ್ತಿ ಒತ್ತೆ ಇಟ್ಟಂತೆ. ಅದಕ್ಕೆ ಬಡ್ಡಿ ಕಟ್ಟಿಯೇ ಸಾಕಾಗುತ್ತದೆ. ಕಾಂಗ್ರೆಸ್ ಸರ್ಕಾರ ಬಡವರನ್ನು ಸುಡುವ ಮನೆಯಂತಾಗಿದೆ. ಯಾವತ್ತೇ ಚುನಾವಣೆ ಎದುರಾದರೂ ವಿಧಾನಸಭೆಯ ಮೂರನೇ ಮಹಡಿಯಿಂದ ಕಾಂಗ್ರೆಸ್ಸನ್ನು ಓಡಿಸಿ, ಬಿಜೆಪಿ ಇರಲಿದೆ ಎಂದರು.
ತನ್ನ ಮೇಲೆ ಒಂದು ಕಪ್ಪುಚುಕ್ಕೆಯೂ ಇಲ್ಲವೆಂದು ಹೇಳುವ ಸಿದ್ದರಾಮಯ್ಯನವರೇ, ನೀವು ಸಂಪೂರ್ಣ ಕಾಗೆಯಂತಾಗಿದ್ದೀರಿ. ಇನ್ನೆಲ್ಲಿ ನಿಮ್ಮಲ್ಲಿ ಕಪ್ಪು ಹುಡುಕೋದು? 65 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ದಲಿತರ ಉದ್ಧಾರ ಮಾಡಲಿಲ್ಲ. ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರರನ್ನೇ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ, ಅಂಬೇಡ್ಕರ್‌ಗೆ ಸೋಲಿಸಿದ್ದು ಸಾವರ್ಕರ್ ಅಂತಾ ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ. ನಾನು ಸವಾಲು ಹಾಕುತ್ತೇನೆ. ಒಂದುವೇಳೆ ಅಂಬೇಡ್ಕರ್‌ಗೆ ಸಾವರ್ಕರ್ ಸೋಲಿಸಿದ್ದನ್ನು ನೀವು ಸಾಬೀತುಪಡಿಸಿದರೆ ವಿಪಕ್ಷ ನಾಯಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವೆ. ಇಲ್ಲವಾದರೆ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಸವಾಲೆಸೆದರು.- - -
(ಬಾಕ್ಸ್)* ಮಹಾ ಮೋಸಗಾರ ಸಿದ್ದರಾಮಯ್ಯ: ಗೋವಿಂದ ಕಾರಜೋಳ ಆರೋಪ
ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವುದಾಗಿ ಹೇಳಿ, ಮೋಸ ಮಾಡಿದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನತೆಗೆ ಮೋಸ ಮಾಡಿಯೇ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ ಎಂದು ಚಿತ್ರದುರ್ಗ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದರು.ಬಿಜೆಪಿ ಜನಾಕ್ರೋಶ ಯಾತ್ರೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿಯಾದ ಭ್ರಷ್ಟಾಚಾರ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಸರ್ಕಾರ ನೂರಾರು ಕೋಟಿ ರು. ಹಗರಣವನ್ನು ಮಾಡಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮನೆಗೆ ಹೋಗಲಿ. ಜನತೆ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವಿಷಯ ಮಧ್ಯೆ ತಂದಿದ್ದಾರೆ. ಜಾತಿ, ಧರ್ಮಗಳ ಮಧ್ಯೆ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಮಹಾ ಮೋಸಗಾರ ಸಿದ್ದರಾಮಯ್ಯ. ಹಲವಾರು ಜಾತಿಗಳು ಇಂದಿಗೂ ದುಸ್ಥಿತಿಯಲ್ಲಿವೆ. ಎಲ್ಲ ಜಾತಿ, ಧರ್ಮದಲ್ಲೂ ದಲಿತರಿದ್ದಾರೆ. ಸಾಮಾಜಿಕ ನ್ಯಾಯದ ಗಂಧ, ಗಾಳಿಯೂ ಗೊತ್ತಿಲ್ಲದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ₹2 ಸಾವಿರ ಕೊಟ್ಟು, ₹10 ಸಾವಿರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಸೆಯಬೇಕು ಎಂದು ಜನತೆಗೆ ತಿಳಿಸಿದರು.- - -