ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಸದಾಶಿವರೆಡ್ಡಿಯವರ ಮೇಲಿನ ಹಲ್ಲೆ ಖಂಡಿಸಿ ವಕೀಲರು ಮೌನ ಪ್ರತಿಭಟನೆ ಮಾಡಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ವಕೀಲರು ಬಲಗೈ ತೋಳಿಗೆ ಕೆಂಪು ಪಟ್ಟಿ ಧರಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಹಲ್ಲೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ಅವರ ಕಚೇರಿಯಲ್ಲಿ ನಡೆದ ದೈಹಿಕ ಹಲ್ಲೆ ಮತ್ತು ದಾಳಿಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈಗಾಗಲೇ ವಕೀಲರ ರಕ್ಷಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ ಕೂಡ ದುಷ್ಕರ್ಮಿಗಳು ಯಾವುದೇ ರೀತಿಯ ಕಾನೂನಿನ ಭಯ ಇಲ್ಲದೆ, ಹಿರಿಯ ವಕೀಲರ ಕಚೇರಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿರುವುದು ಗೂಂಡಾವರ್ತನೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ದಾಳಿಗಳು ಜರುಗುತ್ತಿವೆ. ಕಾನೂನನ್ನು ಮತ್ತು ಸಮಾಜವನ್ನು ರಕ್ಷಣೆ ಮಾಡುವ ವಕೀಲರ ಮೇಲೆ ನಡೆಯುತ್ತಿರುವ ದಾಳಿಗಳಿಂದ ನಾಗರಿಕ ಸಮಾಜದಲ್ಲಿ ಆತಂಕ ಸೃಷ್ಟಿಯಾಗಿ ವಕೀಲರ ಪರಿಸ್ಥಿತಿ ಹೀಗಾದರೆ ಜನಸಾಮಾನ್ಯರ ಪಾಡೇನು ಎಂಬು ಪ್ರಶ್ನೆ ಉದ್ಬವಿಸುತ್ತದೆ.ಆದ್ದರಿಂದ ವಕೀಲರ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ತೀರಾ ಆಗತ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಹಲ್ಲೆಕೋರರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ವಕೀಲರ ರಕ್ಷಣೆ ಕಾಯಿದೆಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ಮತ್ತು ರಾಜ್ಯದ ಎಲ್ಲಾ ವಕೀಲ ಸಮುದಾಯಕ್ಕೆ ಅಗತ್ಯ ರಕ್ಷಣೆಯನ್ನು ಒದಗಿಸಬೇಕು ಎಂದು ವಕೀಲರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಂ.ಶ್ರೀವತ್ಸ, ಉಪಾಧ್ಯಕ್ಷ ವಿ.ಚಂದ್ರಶೇಖರ್, ಕಾರ್ಯದರ್ಶಿ ಟಿ.ತಿಮ್ಮೇಗಡೌ, ಖಜಾಂಚಿ ಆರ್.ಸಿ.ಮಂಜೇಶ್ ಗೌಡ, ಸದಸ್ಯರಾದ ಕೆ.ಗುರುಮೂರ್ತಿ, ಆರ್.ವಿ.ರಘು, ಎಚ್.ಪಿ.ಶಿವಾನಂದ, ಆರ್.ಎಸ್.ನವೀನ್ ಕುಮಾರ್, ಪಿ.ಸಂಜಯ್, ಪಿ.ಶಶಿಧರ, ಆರ್.ವರಲಕ್ಷ್ಮಿ, ಪಿ.ರಾಜೇಶ್ವರಿ ಹಾಗೂ ವಕೀಲರು ಭಾಗವಹಿಸಿದ್ದರು.