ಗದಗ: ಮಾಜಿ ಪ್ರೇಮಿಯೋರ್ವ ಬ್ಲ್ಯಾಕ್ ಮೇಲ್ ಮಾಡಿದ್ದಕ್ಕೆ ಹೆದರಿ, ಮದುವೆ ಸಂಭ್ರಮದಲ್ಲಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸೈರಾಬಾನು ನದಾಫ್ (29) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಸೈರಾಬಾನು ಡೆತ್‌ನೋಟ್‌ನಲ್ಲಿ ಮೈಲಾರಿ ಎನ್ನುವ ಯುವಕನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ ಮಾಡಿದ್ದು, ಈ ಕುರಿತು ಯುವತಿಯ ತಂದೆ ಹುಚ್ಚುಸಾಬ ನದಾಫ್ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮದುವೆ ನಿಗದಿ: ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದ ಸೈರಾಬಾನು ಮದುವೆ ಮೇ 8ರಂದು ನಿಶ್ಚಯವಾಗಿತ್ತು. ವಾರದ ಹಿಂದಷ್ಟೆ ಖುಷಿ ಖುಷಿಯಿಂದ ಮದುವೆ ಜವಳಿ, ಬಂಗಾರ ಖರೀದಿ ಮಾಡಿದ್ದರು. ಯುವತಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಭಾನುವಾರ ಕುಟುಂಬದ ಸದಸ್ಯರೆಲ್ಲರೂ ಮದುವೆಯ ಇನ್ನಿತರ ವಸ್ತುಗಳ ಖರೀದಿಗೆ ಗದಗ ನಗರಕ್ಕೆ ಹೋದಾಗ, ಸೈರಾಬಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮದುವೆ ಖರೀದಿ ಮಾಡಿಕೊಂಡು ರಾತ್ರಿ ತಡವಾಗಿ ಬಂದ ಕುಟುಂಬದ ಸದಸ್ಯರು ಬಾಗಿಲು ತೆರೆಯುವಂತೆ ಸೈರಾಬಾನುಗೆ ಕೂಗಿ ಕರೆದಿದ್ದಾರೆ. ಆದರೆ ಸೈರಾಬಾನು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಿನ್ನೆಲೆ: ಆತ್ಮಹತ್ಯೆ ಮಾಡಿಕೊಂಡ ಸೈರಾಬಾನು ಅವರನ್ನು ಮೈಲಾರಿ ಎನ್ನುವ ವ್ಯಕ್ತಿ ಪ್ರೀತಿಸುತ್ತಿದ್ದ. ಐದು ವರ್ಷದ ಹಿಂದೆಯೇ ಅವರಿಬ್ಬರ ಪ್ರೀತಿ ಮುರಿದುಬಿದ್ದಿತ್ತು. ಆದರೆ ಮೈಲಾರಿ, ತಿಂಗಳ ಹಿಂದಷ್ಟೆ ಇನ್‌ಸ್ಟಾಗ್ರಾಂ ಮೂಲಕ ಸೈರಾಬಾನು ಸಂಪರ್ಕಿಸಿ, ಭವಿಷ್ಯದಲ್ಲಿ ನಿನಗೆ ಯಾವುದೇ ರೀತಿಯ ತೊಂದರೆ ಕೊಡಲ್ಲ ಎಂದು ನಂಬಿಸಿ, ಆಕೆಯ ಜನ್ಮದಿನವನ್ನು ಆಚರಿಸಿದ್ದ. ಆದರೆ ಜನ್ಮದಿನಾಚರಣೆ ನಂತರ ವರಸೆ ಬದಲಿಸಿದ ಮಾಜಿ ಪ್ರೇಮಿ, ತನ್ನ ಬಳಿ ಇರುವ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ. ಹೀಗಾಗಿ ಮರ್ಯಾದೆಗೆ ಹೆದರಿ ಸೈರಾಬಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. .