ಕೋಟೆ ನಾಡಲ್ಲಿ ಬಿಜೆಪಿ, ಕಾಂಗ್ರೆಸ್ ಭರ್ಜರಿ ರೋಡ್ ಶೋ

KannadaprabhaNewsNetwork | Published : Apr 5, 2024 1:01 AM

ಸಾರಾಂಶ

ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಡೇ ದಿನವಾದ ಗುರುವಾರ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ರೋಡ್ ಶೋ ನಡೆಸಿದವು.

ಕನ್ನಡಪ್ರಭವಾರ್ತೆ ಚಿತ್ರದುರ್ಗಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಡೇ ದಿನವಾದ ಗುರುವಾರ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ರೋಡ್ ಶೋ ನಡೆಸಿದವು. ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಸಾಗಿ ಬಂದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ಉರಿ ಬಿಸಿಲು ಲೆಕ್ಕಿಸದೆ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರಿಗೆ ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಹಾಗಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಶಿರಾ ಮತ್ತು ಪಾವಗಡದ ಜನಪ್ರತಿನಿಧಿಗಳು ಚಂದ್ರಪ್ಪ ಅವರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವರೆಂದು ಹೇಳಲಾಗಿತ್ತಾದರೂ ಕಡೇ ಗಳಿಗೆಯಲ್ಲಿ ಅವರ ಹಾಜರಿ ರದ್ದಾಗಿತ್ತು.ನೀಲಕಂಠೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಆಗಮಿಸಿದ ಅಭ್ಯರ್ಥಿ ಚಂದ್ರಪ್ಪಗೆ ಟಿ.ಬಿ.ಜಯಚಂದ್ರ, ಜಿ.ಎಸ್.ಮಂಜುನಾಥ್, ಮಾಜಿ ಶಾಸಕ ಉಮಾಪತಿ ಸೇರಿದಂತೆ ಹಲವರು ಸಾಥ್ ನೀಡಿದರು. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಮೆರವಣಿಗೆಯಲ್ಲಿ ಸಾಗಿದವರಿಗೆ ಟೋಪಿ ನೀಡಲಾಗಿತ್ತು. ಚಿತ್ರದುರ್ಗದ ನಗರದ ಡಿವೈಡರ್‌ಗಳು ಸೀಳಿರುವುದರಿಂದ ಒಂದು ಭಾಗದಲ್ಲಿ ಮೆರವಣಿಗೆಗೆ ಅವಕಾಶ ನೀಡಿ ಮತ್ತೊಂದು ದಾರಿಯಲ್ಲಿ ವಾಹನಗಳ ಓಡಾಟಕ್ಕೆ ಅನುಮತಿಸಲಾಗಿತ್ತು. ಹಾಗಾಗಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.

ಕೇಸರಿಮಯ ಚಿತ್ರದುರ್ಗ:

ನಾಮಪತ್ರ ಸಲ್ಲಿಸುವ ಸಂಬಂಧ ಬಿಜೆಪಿ ನಡೆಸಿದ ರೋಡ್ ಶೋಗೆ ಚಿತ್ರದುರ್ಗ ಕಂಪಿಸಿದಂತೆ ಕಂಡು ಬಂತು. ಇಡೀ ನಗರವೇ ಕೇಸರಿ ಮಯವಾಗಿತ್ತು. ನೀಲಕಂಠೇಶ್ವರ ದೇವಸ್ಥಾನದಿಂದ ಸಾಗಿ ಬಂದ ಮೆರವಣಿಗೆ ಗಾಂಧಿ ವೃತ್ತದ ಬಳಿ ಬಂದಾಗ ರಸ್ತೆ ಜಾಮ್ ಆಯಿತು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿದಾಗ ಸಂಚಾರ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಗಾಲಿ ಜನಾರ್ಧನ ರೆಡ್ಡಿ, ಅಭ್ಯರ್ಥಿ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ತಿಪ್ಪಾರೆಡ್ಡಿ ಸೇರಿದಂತೆ ಜೆಡಿಎಸ್ ಮುಖಂಡರು ತೆರೆದ ವಾಹನದಲ್ಲಿ ಸಾಗಿದರು.

ರಾಜ್ಯದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಜೆಡಿಎಸ್ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ವೇಳೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆ ಪ್ರವಾಸಿ ಮಂದಿರದ ಮುಂಭಾಗ ಸಾಗುವಾಗ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು ವಿಶೇಷವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ರಾಘವೇಂದ್ರ ಹೆಲಿಕ್ಯಾಪ್ಟರ್ ಮೂಲಕ ತುಸು ತಡವಾಗಿ ಆಗಮಿಸಿದರು. ಎಸ್ ಜೆಎಂ ಹೆಲಿಪ್ಯಾಡ್ ನಲ್ಲಿ ಇಳಿದು ನೇರವಾಗಿ ಮೆರವಣಿಗೆಗೆ ಸೇರಿಕೊಂಡರು.

Share this article