ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಸಾವಿನ ದವಡೆಯಿಂದ ಹೊರಬಂದಿರುವ ಪುಟ್ಟ ಮಗು ಸಾತ್ವಿಕ ಮುಜಗೊಂಡಗೆ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಲಾಗುತ್ತಿದೆ.
ವಿಜಯಪುರ : ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ಸಾವಿನ ದವಡೆಯಿಂದ ಹೊರಬಂದಿರುವ ಪುಟ್ಟ ಮಗು ಸಾತ್ವಿಕ ಮುಜಗೊಂಡಗೆ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ, ಚಿಕಿತ್ಸೆ ಕೊಡಲಾಗುತ್ತಿದೆ. ಮಗು ಆರೋಗ್ಯವಾಗಿದೆ. ಮಗುವಿನ ಪಲ್ಸ್‌ರೇಟ್ ಹಾಗೂ ಉಸಿರಾಟ ಸಹಜವಾಗಿದ್ದು, ಎರಡು ತೋಳುಗಳಿಗೆ ಕೊಂಚ ಗಾಯವಾಗಿದ್ದು, ನೋವು ನಿವಾರಕ ಮುಲಾಮು ಹಚ್ಚಲಾಗಿದೆ.
ಆಸ್ಪತ್ರೆಯಲ್ಲಿ ಮಗುವಿನ ಎದೆ, ಮೆದುಳು, ಹೊಟ್ಟೆಯ ಭಾಗದ ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿಸಿರುವ ಜಿಲ್ಲಾಸ್ಪತ್ರೆ ವೈದ್ಯರು ರಿಪೋರ್ಟ್‌ಗಳು ನಾರ್ಮಲ್ ಆಗಿವೆ. ಚಿಕ್ಕಮಕ್ಕಳ ತಜ್ಞರಾದ ಡಾ.ರೇಣುಕಾ ಪಾಟೀಲ್, ಡಾ ಸುನೀಲ್ ರೂಡಗಿ, ಡಾ.ಶೈಲಶ್ರೀ ಪಾಟೀಲ್, ಡಾ.ರವಿ ಬರಡೊಲ, ಡಾ.ಸಾವಳಗಿ ಸೇರಿ ಐವರು ತಜ್ಞರಿಂದ ಮಗುವಿನ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ಎಲುಬು ಕೀಲು, ಇ.ಎನ್.ಟಿ ತಜ್ಞರು, ಮಕ್ಕಳ ಶಸ್ತ್ರ ಚಿಕಿತ್ಸಕರಿಂದ ತಪಾಸಣೆಯನ್ನೂ ನಡೆಸಲಾಗಿದೆ. ಎಲ್ಲವೂ ಸಹಜವಾಗಿವೆ ಎಂದು ವೈದ್ಯರ ತಂಡ ದೃಢಪಡಿಸಿದೆ.
ಪತ್ನಿ ಹೆರಿಗೆ ಬಿಟ್ಟು ತೊರೆದು ರಕ್ಷಣಾ ಕಾರ್ಯಕ್ಕೆ:
ಜೀವದ ಹಂಗು ತೊರೆದು ಮಗುವನ್ನು ರಕ್ಷಣೆ ಮಾಡಿ ಹೊರತಂದು ಆ್ಯಂಬುಲೆನ್ಸ್‌ಗೆ ಬಿಟ್ಟಿದ್ದ ಬೆಳಗಾವಿಯ ಎಸ್‌ಡಿಆರ್‌ಎಫ್ ತಂಡದ ತುಳಜಪ್ಪ ತಮ್ಮ ಕಾರ್ಯಾಚರಣೆಯ ಅನುಭವ ಹಂಚಿಕೊಂಡಿದ್ದಾರೆ. ಎಸ್‌ಡಿಆರ್‌ಎಫ್ ಸಿಬ್ಬಂದಿಯೊಬ್ಬರು ತಮ್ಮ ಪತ್ನಿಯ ಹೆರಿಗೆ ಹಿನ್ನೆಲೆ ಹೋಗಬೇಕಿದ್ದರೂ ಅದನ್ನು ಬಿಟ್ಟು ಇತ್ತ ಕಾರ್ಯಾಚರಣೆಗೆ ಬಂದಿದ್ದನ್ನು ನೆನಪಿಸಿಕೊಂಡರು. ಪತ್ನಿಯ ಹೆರಿಗೆ ಬಿಟ್ಟು ಬಂದು ಮಗುವನ್ನು ರಕ್ಷಣೆ ಮಾಡಿದ್ದು ನನಗೆ ಸಂತೃಪ್ತಿ ತಂದಿದೆ
ಎಂದಿದ್ದಾರೆ.ಜನ್ಮದಿನ ರಜೆ ಕ್ಯಾನ್ಸಲ್ ಮಾಡಿ ರಕ್ಷಣೆಗೆ:
ಇನ್ನೋರ್ವ ಸಿಬ್ಬಂದಿ ತನ್ನ ಹುಟ್ಟುಹಬ್ಬದ ಪ್ರಯುಕ್ತ ರಜೆ ತೆಗೆದುಕೊಂಡು ಹೊರಡಲು ಸಿದ್ಧವಾಗಿದ್ದ ಸಮಯದಲ್ಲಿ ಮಗು ಕೊಳವೆಬಾವಿಗೆ ಬಿದ್ದಿರುವ ಮಾಹಿತಿ ಬಂದಾಕ್ಷಣ ರಜೆ ಕ್ಯಾನ್ಸಲ್ ಮಾಡಿ ಬಂದಿದ್ದು, ಮಗುವನ್ನು ಉಳಿಸಿದ ಹೆಮ್ಮೆಯಿಂದ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ತೇನೆ ಎಂದು ಅನುಭವ ಹಂಚಿಕೊಂಡಿದ್ದಾರೆ.