ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಂಗಳವಾರ ಆಯೋಜಿಸಿರುವ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ಮುಖಂಡರು ಟೀಕಾ ಪ್ರಹಾರ ನಡೆಸಿದ್ದಾರೆ. ರಾಜ್ಯ ಸರ್ಕಾರ ಏನನ್ನೂ ಮಾಡದೇ ಸಮಾವೇಶ ಮಾಡಲು ಹೊರಟಿದೆ. ಜನರ ಬದುಕಿಗೆ ಈ ಸರ್ಕಾರ ಬರೆ ಎಳೆದಿದೆ ಎಂದು ದೂರಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಗ್ರೇಟರ್ ಬೆಂಗಳೂರು ಎಂದು ಹೇಳಿದ ಸರ್ಕಾರ, ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ. ರೈತರಿಗೆ ಹೊಸ ಯೋಜನೆ ನೀಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಅಭಿವೃದ್ಧಿ ಯೋಜನೆ ಪ್ರಕಟಿಸಿಲ್ಲ. ಯುವಕರಿಗೆ ಸ್ವಾಭಿಮಾನದ ಬದುಕನ್ನು ನೀಡಿಲ್ಲ ಎಂದು ಹೇಳಿದರು.ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ನಿಂತುಹೋಗಿದೆ. ಆಡಳಿತ ಪಕ್ಷದ ಶಾಸಕರು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಬೇಸತ್ತಿರುವುದು ಜಗಜ್ಜಾಹೀರಾಗಿದೆ. ಮೊದಲ ಬಾರಿ ಗೆದ್ದ ಶಾಸಕರಾದ ನಾವು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಲಾ ಕೊಠಡಿ ಕಟ್ಟಿಸಲೂ ಸಾಧ್ಯವಾಗುತ್ತಿಲ್ಲ ಎಂದು ಹರಿಹಾಯ್ದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸಿ.ಟಿ.ರವಿ, ದಿನ ಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಡವರು, ಮಧ್ಯಮ ವರ್ಗದವರ ಜೇಬಿಗೆ ಸರ್ಕಾರ ಕತ್ತರಿ ಹಾಕಿರುವುದು ಸರ್ಕಾರದ ಸಾಧನೆಯೇ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಯಾವುದೇ ಸಾಧನೆ ಮಾಡದೆ ಅಭಿವೃದ್ಧಿ ಶೂನ್ಯ ಸರ್ಕಾರ ನಗೆ ಪಾಟಲಿಗೆ ಈಡಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಅಪಪ್ರಚಾರ ಮಾಡಿ, ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಮಡಿಕೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ, ರಾಜ್ಯ ಸರ್ಕಾರ ಮಿತಿ ಮೀರಿ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದೆ. ಕರ್ನಾಟಕದ ಪ್ರತೀ ವ್ಯಕ್ತಿಯ ಮೇಲೆ ₹12 ಸಾವಿರ ಸಾಲ ಹೊರಿಸಿದೆ ಎಂದು ಟೀಕಿಸಿದರು.ಇದು ಸಾಧನೆಯ ಸಮಾವೇಶವಲ್ಲ, ಅದು ಶೂನ್ಯ ಸಾಧನೆ ಹಾಗೂ ವೇದನೆ, ರೋಧನೆ ಸಮಾವೇಶ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಚಾಮರಾಜನಗರದಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಮುಂದುವರಿದಿರುವಾಗ ರಾಜ್ಯ ಸರ್ಕಾರ ಯಾವ ಪುರಷಾರ್ಥಕ್ಕೆ ಸಮಾವೇಶ ಮಾಡುತ್ತಿದೆ. ಗುತ್ತಿಗೆದಾರರಿಗೆ ಬಿಲ್ ಪಾವತಿಯಗಿಲ್ಲ. ಕಮಿಷನ್ ಮೊತ್ತ ಶೇ.60ಕ್ಕೆ ಏರಿಕೆಯಾಗಿದೆ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ ಎಂದು ದೂರಿದರು.
ಹುಬ್ಬಳ್ಳಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮತ್ತು ಶಾಸಕ ಮಹೇಶ ಟೆಂಗಿನಕಾಯಿ, ಎರಡು ವರ್ಷ ರಾಜ್ಯವನ್ನು ಲೂಟಿ, ದರೋಡೆ ಮಾಡಿದ್ದಕ್ಕೆ ಸಮಾವೇಶನಾ? ಎಐಸಿಸಿಗೆ ರಾಜ್ಯ ಎಟಿಎಂ ಆಗಿದೆ ಎಂದು ಆರೋಪಿಸಿದರು.