ಇಂದು ರಜೆ ನೀಡದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

KannadaprabhaNewsNetwork |  
Published : Jan 22, 2024, 02:15 AM IST
ಫೋಟುಃ-21ಜೆನ್ಜಿ2—ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ  ಅವರನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಸನ್ಮಾನಿಸಿದರು. | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಮ ವಿರೋಧಿ, ಹಿಂದೂ ವಿರೋಧಿ ನೀತಿ ತಾಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಾಮ ವಿರೋಧಿ, ಹಿಂದೂ ವಿರೋಧಿ ನೀತಿ ತಾಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ರಜೆ ಘೋಷಿಸುವಂತೆ ವಿಪಕ್ಷ ನಾಯಕ ಆರ್‌.ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ರಜೆ ನೀಡುವಂತೆ ಕೇಳಿದ್ದರು, ಆದರೆ ಸಿದ್ದರಾಮಯ್ಯ ರಜೆ ನೀಡುವುದಿಲ್ಲ ಎಂದಿದ್ದಕ್ಕೆ ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.

ಧಾರವಾಡದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾಂಗ್ರೆಸ್ಸಿಗರಿಗೆ ಶ್ರೀರಾಮನ ಶಾಪ ತಟ್ಟದೇ ಇರದು ಎಂದು ಕಿಡಿ ಕಾರಿದ್ದಾರೆ. ಕೊಪ್ಪಳದ ಆಂಜನಾದ್ರಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೇಶವೇ ರಾಮನತ್ತ ಚಿತ್ತ ಹರಿಸುತ್ತಿದೆ. ಆದರೆ, ರಜೆ ನೀಡಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ವಿಷಾದನೀಯ. ರಾಜ್ಯದಲ್ಲಿರುವುದು ಶ್ರೀರಾಮ ವಿರೋಧಿ ಸರ್ಕಾರ ಎಂದು ಜರಿದರು.

ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ದೇಶದ ಹಲವೆಡೆ ಸೋಮವಾರ ರಜೆ ನೀಡಲಾಗಿದೆ. ಆದರೆ, ಕರ್ನಾಟಕ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ. ಸಿದ್ದರಾಮಯ್ಯನವರು ನನ್ನ ಹೆಸರಿನಲ್ಲೂ ರಾಮ ಇದ್ದಾನೆ ಎಂದು ಹೇಳುತ್ತಾರೆ. ಆದರೆ, ಅವರು ರಾಮಭಕ್ತ ಅಲ್ಲ ರಹೀಂ ಭಕ್ತ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ, ವೇದವ್ಯಾಸ್‌ ಕಾಮತ್‌, ನಳಿನ್‌ ಕುಮಾರ್‌ ಕಟೀಲ್‌ ಸೇರಿ ಹಲವು ಶಾಸಕರು, ಸಂಸದರು, ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಸೇರಿ ಹಲವು ಹಿಂದೂಪರ ಸಂಘಟನೆಯ ನಾಯಕರು ಕೂಡ ರಜೆ ನೀಡದ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ