ಹುಬ್ಬಳ್ಳಿ: ರಾಜ್ಯ ಸರ್ಕಾರದ ನಡೆ ಖಂಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಮೂರು ದಿನಗಳ ಕಾಲ ಬೃಹತ್ ಹೋರಾಟ ಹಮ್ಮಿಕೊಳ್ಳುವ ಕುರಿತು ಬುಧವಾರ ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ನಡೆಸಿ ನಿರ್ಧರಿಸಲಾಯಿತು. ಜತೆಗೆ ಸಭೆಯಲ್ಲಿ ಹು-ಧಾ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯ ಸರ್ಕಾರ ವಿರುದ್ಧ ಸದನ ವೇಳೆ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ 3 ದಿನಗಳ ಕಾಲ ಹುಬ್ಬಳ್ಳಿ ಧಾರವಾಡದಲ್ಲಿ ಮತ್ತು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದರು.ಹನಿಟ್ರ್ಯಾಪ್ ಪ್ರಕರಣ, ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ, ಡಿ.ಕೆ. ಶಿವಕುಮಾರ ಸಂವಿಧಾನ ವಿರೋಧಿ ಹೇಳಿಕೆ ವಿರೋಧಿಸಿ ಸದನದಲ್ಲಿ 18 ಶಾಸಕರ ಅಮಾನತು ವಾಪಸ್ ಪಡೆಯುವ ಕುರಿತು ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿವೆ. ರಾಜ್ಯದಲ್ಲಿ 4 ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಮೈಸೂರು, ತುಮಕೂರು, ಹುಬ್ಬಳ್ಳಿ- ಧಾರವಾಡ, ಕೊಪ್ಪಳದಲ್ಲಿ ಬೃಹತ್ ಮಟ್ಟದ ಪ್ರತಿಭಟನೆಗಳು ನಡೆಯಲಿದ್ದು ಅಹೋರಾತ್ರಿ ಧರಣಿ ಮಾಡಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ಸಾಗರೋಪಾದಿಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಮಾತನಾಡಿ, ಪ್ರತಿಭಟನೆ ಉದ್ದೇಶ ರಾಜ್ಯ ಸರ್ಕಾರದ ವಿರುದ್ಧವಾಗಿದೆ. ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲಾತಿ, ಡಿ.ಕೆ. ಶಿವಕುಮಾರ್ ಸಂವಿಧಾನ ವಿರೋಧಿ ಹೇಳಿಕೆ, ರಾಜ್ಯ ಸರ್ಕಾರದ ಅವ್ಯವಹಾರಗಳ ವಿರುದ್ಧ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಮಾಜಿ ಶಾಸಕ ಅಶೋಕ ಕಾಟವೆ, ಸೀಮಾ ಮಸೂತಿ, ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ, ಪಕ್ಷದ ಮಹಾನಗರ ಹಾಗೂ ಗ್ರಾಮಾಂತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.