ಹೊಸಪೇಟೆ; ಶಿಕ್ಷಣ ವಿರೋಧಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಎಸ್‌ಎಫ್‌ಐನ ರಾಷ್ಟ್ರೀಯ ಉಪಾಧ್ಯಕ್ಷ ನಿತೀಶ್ ನಾರಾಯಣ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲಾಗಿದೆ. ದಿಲ್ಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಖಾಸಗಿ ಮ್ಯಾನೇಜ್‌ಮೆಂಟ್ ಕೋರ್ಸ್ ತೆರೆಯಲಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕಾಗಿದೆ. ಹಾಗಾಗಿ ಕೋಮುವಾದಿ ಬಿಜೆಪಿ ಸೋಲಿಸಬೇಕಿದೆ ಎಂದರು.
ಬಿಜೆಪಿಯನ್ನು ಇಡೀ ದೇಶಾದ್ಯಂತ ತಿರಸ್ಕಾರ ಮಾಡಬೇಕು. ಇನ್ನು ಎನ್‌ಇಪಿ ರದ್ದುಗೊಳಿಸಬೇಕು. ಎನ್ಇಪಿ ಈ ದೇಶದ ಸೌಹಾರ್ದ, ಜಾತ್ಯತೀತತೆಗೆ ಧಕ್ಕೆ ತರುತ್ತಿದೆ. ದಲಿತ ಮತ್ತು ಮೇಲ್ವರ್ಗದ ವಿದ್ಯಾರ್ಥಿಗಳ ನಡುವೆ ಅಂತರ ಸೃಷ್ಟಿ ಮಾಡಿ ಕೋಮು ವಿಷಬೀಜವನ್ನು ಬಿಜೆಪಿ ಬಿತ್ತುತ್ತಿದೆ ಎಂದು ದೂರಿದರು.ದಲಿತ ಸಂಶೋಧನ ವಿದ್ಯಾರ್ಥಿ ಮುಂಬೈ ವಿಶ್ವವಿದ್ಯಾಲಯದ ರಾಮದಾಸ್, ಕರ್ನಾಟಕದ ದೊಡ್ಡಬಸವರಾಜ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸರ್ಕಾರ, ಆಡಳಿತದ ವಿರುದ್ಧ ಪ್ರಶ್ನೆ ಮಾಡಿದಕ್ಕೆ ಪಿಎಚ್‌ಡಿ ರದ್ದು ಮಾಡುವಂತೆ ನೋಟಿಸ್ ನೀಡಲಾಗಿತ್ತು. ಇದು ಸಂಪೂರ್ಣ ಅಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತಿದೆ. ಸಂವಿಧಾನ ವಿರೋಧಿಯಾಗಿದೆ. ಅದಕ್ಕಾಗಿ ಎಸ್‌ಎಫ್‌ಐ ಬಿಜೆಪಿಯನ್ನು ತಿರಸ್ಕರಿಸಿ ಎಂದು ಕರೆ ನೀಡಿದೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯನ್ನು ಬಲವಂತವಾಗಿ ಒತ್ತಡ ಹೇರಿ ಜಾರಿ ಮಾಡುತ್ತದೆ. ಇದನ್ನು ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಜಿಡಿಪಿಯ ಶೇ.0.45 ಮಾತ್ರ ಅನುದಾನ ಕೊಟ್ಟಿದೆ. ಖಾಸಗಿ ಹಾಗೂ ವಿದೇಶಿ ವಿಶ್ವವಿದ್ಯಾಲಯಗಲಿಗೆ ಮಾತ್ರ ಆದ್ಯತೆ ಕೊಡಲಾಗುತ್ತಿದೆ. ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಕಡೆಗಣಿಸಲಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿಲ್ಲ. ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೂಡ ದೊರೆಯುತ್ತಿಲ್ಲ ಎಂದು ದೂರಿದರು.ಇನ್ನು ಖಾಸಗಿ ಕೋಟದಲ್ಲಿ ವೃತ್ತಿಪರ ಕೋರ್ಸ್ ಅಭ್ಯಾಸ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನ ನಿರಾಕರಣೆ ಮಾಡಲಾಗಿದೆ ಎಂದರು.
ಈ ಹಿಂದೆ ಕರ್ನಾಟಕದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿದಾಗ ಅಂಬೇಡ್ಕರ್, ಬಸವಣ್ಣ, ಕನಕದಾಸ, ನಾರಾಯಣ ಗುರು ಇನ್ನಿತರ ಮಹಾನ್ ನಾಯಕರಿಗೆ ಅಪಮಾನ ಮಾಡಿದನ್ನು ನಾವು ನೋಡಿದ್ದೇವೆ. ಅದೇ ರೀತಿ ಕೇಂದ್ರ ಸರ್ಕಾರ ತನ್ನ ಹಿಡನ್ ಅಜೆಂಡಾವನ್ನು ಜಾರಿ ಮಾಡಲು ಅನೇಕ ಪಠ್ಯ ಪುಸ್ತಕಗಳನ್ನು ಬದಲಾವಣೆಗೆ ಮುಂದಾಗಿದೆ. ಸಂವಿಧಾನ ವಿರೋಧಿ ಕೆಲಸ ಮಾಡುವ ಬಿಜೆಪಿಯನ್ನು ಸೋಲಿಸಬೇಕು ಎಂದರು.ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ, ರಾಜ್ಯ ಸಮಿತಿ ಸದಸ್ಯ ಶಿವರೆಡ್ಡಿ, ಜಿಲ್ಲಾ ಅಧ್ಯಕ್ಷ ಬಸವರಾಜ ಗುಳ್ಳದಾಳ, ತಾಲೂಕು ಉಪಾಧ್ಯಕ್ಷ ಪವನಕುಮಾರ ಮತ್ತಿತರರಿದ್ದರು.