ಡಾ. ಅಶ್ವತ್ ನಾರಾಯಣ ನೇತೃತ್ವದ ತಂಡ, ಮೂಡಿಗೆರೆ - ಚಿಕ್ಕಮಗಳೂರು ತಾಲೂಕಿನಲ್ಲಿ ಪರಿಶೀಲನೆ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಹಾಗೂ ಮನೆ ಕಳೆದುಕೊಂಡವರ ಭೇಟಿ ಮಾಡಿದ ಬಿಜೆಪಿ ಮುಖಂಡ ಹಾಗೂ ಶಾಸಕ ಡಾ. ಅಶ್ವತ್ ನಾರಾಯಣ್ ನೇತೃತ್ವದ ನಿಯೋಗ ಹಾನಿಯ ಪರಿಶೀಲನೆ ನಡೆಸಿತು.
ಮೂಡಿಗೆರೆ, ಚಿಕ್ಕಮಗಳೂರು ಭಾಗದಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ನಿಯೋಗ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿತು. ಜೊತೆಗೆ ಭಾರಿ ಮಳೆಯಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಯಿತು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಶ್ವತ್ ನಾರಾಯಣ, ವಿಪರೀತ ಮಳೆಯಿಂದಾಗಿ ಬೆಳೆ ನಾಶವಾಗಿದೆ. ಜೊತೆಗೆ ಇಳುವರಿಯೂ ಕುಂಠಿತವಾಗಿದೆ. ರೈತರು ಹಾಗೂ ಕಾಫಿ ಬೆಳೆಗಾರರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಉಂಟಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಭಾರಿ ಮಳೆ ಬಂದಾಗ ಕಾಫಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 56 ಸಾವಿರ ರು. ಪರಿಹಾರ ನೀಡಿದ್ದೆವು. ಈ ಬಾರಿ ರಾಜ್ಯ ಸರ್ಕಾರ ಪ್ರತಿ ಹೆಕ್ಟರ್ ಗೆ ಒಂದು ಲಕ್ಷ ರು. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಕಾಫಿ ಬೆಳಗಾರರಿಗೆ ತಮ್ಮ ಜಮೀನಿನಲ್ಲಿ ಯಾವ ಯಾವ ಬೆಳೆಗಳಿವೆ ಎನ್ನುವುದನ್ನು ಪಹಣಿಯಲ್ಲಿ ನಮೂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪರಿಹಾರವೂ ಬಾರದ ಸ್ಥಿತಿ ಇದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಲೈನ್ ಮ್ಯಾನ್ ಗಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುರಿದು ಬಿದ್ದ ವಿದ್ಯುತ್ ಕಂಬ ಗಳನ್ನು ಬದಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಲೆನಾಡಿನ ಹಳ್ಳಿಗಳು ಕತ್ತಲೆಗೆ ಜಾರಿವೆ ಎಂದು ದೂರಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಪ್ರಮುಖರಾದ ದೀಪಕ್ ದೊಡ್ಡಯ್ಯ, ಕುರುವಂಗಿ ವೆಂಕಟೇಶ್ ಹಾಗೂ ಬಿಜೆಪಿಯ ಮುಖಂಡರು ಇದ್ದರು. 2 ಕೆಸಿಕೆಎಂ 7ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ಶಾಸಕ ಡಾ. ಅಶ್ವತ್ ನಾರಾಯಣ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ, ದೀಪಕ್ ದೊಡ್ಡಯ್ಯ ಇದ್ದರು.