ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಡುಗೋಡಿಯಲ್ಲಿ ನಡೆದಿದ್ದ 6 ವರ್ಷದ ಬಾಲಕಿ ವೆನ್ನೆಲ್ಲಾ ಕೊಲೆ ಪ್ರಕರಣದ ಸಂಬಂಧ ಮರಣೊತ್ತರ ವರದಿ ಮತ್ತು ಎಫ್‌ಎಸ್‌ಎಲ್‌ ವರದಿಯಲ್ಲಿ ಬಾಲಕಿ ಕೊಲೆಯ ಬಗ್ಗೆ ಹಲವು ವಿಚಾರಗಳು ಬಹಿರಂಗವಾಗಿದೆ. ವೆನ್ನೆಲ್ಲಾ ಮುಖದ ಮೇಲೆ ಹಲವು ಗಾಯಗಳು, ಸವೆತದ ಗುರುತುಗಳು, ಮೂಗು ಮತ್ತು ಬಾಯಿಯಿಂದ ರಕ್ತ ಮಿಶ್ರಿತ ದ್ರವ ಬಂದಿರುವುದು. ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿದ ಗಡ್ಡೆಗಳು ಕಂಡು ಬಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಾಲಕಿಯ ತಾಯಿ ಪ್ರಿಯಾಂಕ ಅವರ ಪ್ರಿಯಕರನಾದ ಮೋಹನ್‌ ಮೊಣಕೈಯಿಂದ ಗುದ್ದಿದ್ದ ಹಿನ್ನೆಲೆಯಲ್ಲಿ ಬಾಲಕಿ ವೆನ್ನೆಲ್ಲಾ (6) ಮಾ.24 ರಂದು ಮೃತಪಟ್ಟಿದ್ದಳು. ಆರಂಭದಲ್ಲಿ ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್‌ ವರದಿಗಳ ಆಧಾರದ ಮೇಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಯಿತು. ಕೊಲೆ ಪ್ರಕರಣ ದಾಖಲಿಸಿದ ಬಳಿಕ ಆರೋಪಿಗಳಾದ ಮೋಹನ್‌ ಮತ್ತು ಪ್ರಿಯಾಂಕಳನ್ನು ಬಂಧಿಸಲಾಯಿತು.

ಕೊಲೆ ಎಂದು ಸ್ಪಷ್ಟಪಡಿಸಿದ ವರದಿಗಳು:

ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿಗಳು ಇದು ಕೊಲೆ ಎಂಬುದನ್ನು ಸ್ಪಷ್ಟಪಡಿಸಿದೆ. ಪೊಲೀಸರ ಎಫ್ಎಸ್‌ಎಲ್ ವರದಿ ಬರಲಿ ಎಂದು ಕೊಲೆ‌ ಕೇಸ್ ದಾಖಲಿಸದೆ ಕಾಯ್ದಿದ್ದರು. ಎಫ್‌ಎಸ್‌ಎಲ್‌ ವರದಿ ಬರುವ ಮೊದಲೇ ಇದೊಂದು ಕೊಲೆ‌ ಎಂಬುದು ಪತ್ತೆಮಾಡಲು ಸಾಕಷ್ಟು ಅವಕಾಶ ಇದ್ದರೂ ಸುಮನಿದ್ದರು ಎಂದು ಆರೋಪ. ಇದೇ ಕಾರಣಕ್ಕೆ ಕರ್ತವ್ಯ ಲೋಪ ಎಸಗಿದ್ದ ಆರೋಪದ ಹಿನ್ನೆಲೆಯಲ್ಲಿ ಆಗಿನ ಇನ್ಸ್‌ಪೆಕ್ಟರ್ ರಂಗಸ್ವಾಮಿ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.


ಕೊಲೆ ನಡೆದಿದ್ದು ಹೇಗೆ?ಐಸ್‌ಕ್ರೀಂ ವಿಚಾರವಾಗಿ ಬಾಲಕಿ ವೆನ್ನೆಲ್ಲಾ ಅಳುತ್ತಿದ್ದಾಗ ಆರೋಪಿ ಮೋಹನ್ ಹೊಟ್ಟೆಗೆ ಮೊಣಕೈಯಿಂದ ಬಲವಾಗಿ ಹೊಡೆದಿದ್ದ. ನಂತರ ಆಕೆಯ ಮೂಗು ಬಾಯಿ ಮುಚ್ಚಿದ್ದ ಪರಿಣಾಮ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಳು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆ ತಂದ್ದಾಗ ಪರೀಕ್ಷಿಸಿ ವೈದ್ಯರು ಆಕೆಯು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದರು.

ವರದಿಯಲ್ಲಿ ಬಹಿರಂಗವಾದ ಅಂಶಗಳು

ವೆನ್ನೆಲಾಳ ಮುಖದ ಮೇಲೆ ಹಲವು ಗಾಯಗಳು ಮತ್ತು ಸವೆತದ ಗುರುತುಗಳು ಕಂಡುಬಂದಿವೆ, ಮೂಗು ಮತ್ತು ಬಾಯಿಯಿಂದ ರಕ್ತಮಿಶ್ರಿತ ದ್ರವ ಹೊರಬಂದಿರುವುದು ದಾಖಲಾಗಿದೆ. ಕೈ ಬೆರಳುಗಳ ತುದಿಗಳು ಮತ್ತು ಉಗುರುಗಳ ಬಳಿ ನೀಲಿ ಬಣ್ಣದ ಬದಲಾವಣೆ ಕಂಡುಬಂದಿದೆ. ಉಸಿರಾಟದ ಮಾರ್ಗ (Airway) ಮುಚ್ಚಿಹೋಗಿರುವುದು (Asphyxia), ಹೊಟ್ಟೆಗೆ (Abdomen) ಬಲವಾದ ಹೊಡೆತದಿಂದ ಉಂಟಾದ ಗಾಯ, ಈ ಎರಡು ಕಾರಣದಿಂದ ಮರಣ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಹೊಟ್ಟೆಯಲ್ಲಿ ಸುಮಾರು 400 ಮಿ.ಲೀ. ರಕ್ತ ಪತ್ತೆ, ರಕ್ತ ಹೆಪ್ಪುಗಟ್ಟಿದ ಗಡ್ಡೆಗಳು (Blood clots) ಪತ್ತೆ. ಇದರಿಂದ ಹೊಟ್ಟೆಗೆ ಗಂಭೀರವಾದ ಆಂತರಿಕ ಗಾಯವಾಗಿರುವುದು ದೃಢ. ವಿಷಯುಕ್ತ ಆಹಾರದಿಂದ ಸಾವು ಸಂಭವಿಸಿಲ್ಲ ಎಂದು ಉಲ್ಲೇಖ.

ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಬಾಲಕಿ ವೆಲ್ಲೆನಾ ಕೊಲೆ ಪ್ರಕರಣ ಸೂಕ್ಮ ವಿಚಾರವಾಗಿದೆ. ಬೇರೆ ವಿಭಾಗದ ಎಸಿಪಿ ನೇತೃತ್ವದಲ್ಲಿ ಈ ಪ್ರಕರಣ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ.

-ಸೀಮಂತ್‌ ಕುಮಾರ್‌ ಸಿಂಗ್‌, ನಗರ ಪೊಲೀಸ್‌ ಆಯುಕ್ತ