ಜಿ.ಎಸ್.ಮಂಜುನಾಥ್ ಬಂಧನಕ್ಕೆ ಬಿಜೆಪಿ ಆಗ್ರಹ

KannadaprabhaNewsNetwork | Updated : Mar 13 2024, 02:06 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಕಾಂಗ್ರೆಸ್‌ನ ಜಿ.ಎಸ್.ಮಂಜುನಾಥ ಬಂಧನಕ್ಕೆ ಆಗ್ರಹಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಹಿರಂಗ ಕ್ಷಮೆಯಾಚನೆಗೆ ಒತ್ತಾಯಿಸಿದರು.

ನಗರದ ಬಿಜೆಪಿ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಹಿರಿಯೂರು ಪಟ್ಟಣದ ಹರಿಶ್ಚಂದ್ರಘಾಟ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ.ಎಸ್.ಮಂಜುನಾಥ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇಶದ ಪ್ರಧಾನಿ ಹುದ್ದೆಗೆ ಅಪಮಾನ ಮಾಡಿದ ಘಟನೆ ಇದಾಗಿದೆ. ಅಲ್ಲದೇ ದೇಶ ಹಾಗೂ ಸಮಾಜದಲ್ಲಿ ಶಾಂತಿ ಕದಡಲಿದೆ ಎಂದರು.

ಜಿ.ಎಸ್.ಮಂಜುನಾಥ್ ಮಾತುಗಳು ಕಾಂಗ್ರೆಸ್ ಸಂಸ್ಕೃತಿ ಮತ್ತು ಸಂಸ್ಕಾರ ತಿಳಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಕಾರ್ಮಿಕ ಮಂಡಳಿ ಉಪಾಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದರು.

ರೈತ ಮೊರ್ಚಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ವಿಶ್ವ ಗುರು ಎನಿಸಿಕೊಂಡಿರುವ ಮೋದಿ ವಿರುದ್ದ ತುಚ್ಚವಾಗಿ ಮಾತನಾಡಿರುವುದು ಸರಿಯಲ್ಲ. ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು. ಜಿಲ್ಲಾಡಳಿತ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಬಂಧಿಸಿ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದರು.

ಬಿಜೆಪಿ ನರೇಂದ್ರ ಹೊನ್ನಾಳ್, ಎಸ್.ಸಿ ಮೊರ್ಚಾ ಜಿಲ್ಲಾದ್ಯಕ್ಷ ಕರಿಕೇರೆ ತಿಪ್ಪೆಸ್ವಾಮಿ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಒನಕೆ ತಿಪ್ಪೇಸ್ವಾಮಿ, ಪರುಶುರಾಂ, ಪಾಂಡು, ಸಿದ್ದಾರ್ಥ್, ಚಂದ್ರು, ಪ್ರಶಾಂತ್, ಕಿರಣ್, ಬಸಮ್ಮ, ಎನ್.ವೀಣಾ, ಹಳಿಯೂರು ತಿಪ್ಪೇಸ್ವಾಮಿ, ಪ್ರಭಣ್ಣ, ವಿರೇಶ್ ಜಾಲಿಕಟ್ಟೆ, ತಿಮ್ಮಣ್ಣ, ಸಿಂಧೂ, ತನಯ, ಕಮಲ, ಮಲ್ಲೇಶಣ್ಣ, ಅಭಿಲಾಶ್, ವಿರೂಪಾಕ್ಷಯಾದವ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.ಮಂಜುನಾಥ್ ವಿರುದ್ಧ ಮತ್ತೊಂದು ದೂರುಕನ್ನಡಪ್ರಭವಾರ್ತೆ ಚಿತ್ರದುರ್ಗ

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಕಾಂಗ್ರೆಸ್ ಮುಖಂಡ ಜಿ.ಎಸ್. ಮಂಜುನಾಥ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮತ್ತೊಂದು ದೂರು ಸಲ್ಲಿಕೆ ಯಾಗಿದೆ. ವಿಶ್ವ ಹಿಂದೂ ಪರಿಷದ್ ಮುಖಂಡ ಪಿ.ರುದ್ರೇಶ್ ಮಂಗಳವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕಾರ್ಮಿಕ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್, ಪ್ರಧಾನಿ ಮೋದಿ ನನ್ನ ಕೈಲಿ ಸಿಕ್ಕರೆ ಕಾಲಲ್ಲಿ ಇರುವುದನ್ನುತೆಗೆದುಕೊಂಡು ಹೊಡೆಯುವೆ ಎಂದು ಅವಾಚ್ಯ ಶಬ್ದ ಬಳಸಿ ನಿಂದಿಸಿರುತ್ತಾರೆ. ಇದರಿಂದ ದೇಶದ ಪ್ರಧಾನಿ ಹುದ್ದೆಗೆ ಅಪಮಾನ ಮಾಡಿದಂತಾಗಿದೆ. ಅವರ ಮಾತುಗಳಿಂದ ದೇಶದ ಪ್ರಜೆಗಳಿಗೆ ಹಾಗೂ ಕಾರ್ಯ ಕರ್ತರಿಗೆ ನೋವುಂಟಾಗಿರುತ್ತದೆ. ಜಿ.ಎಸ್.ಮಂಜುನಾಥ್‍ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Share this article