ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗ್ಯಾರಂಟಿಗಳ ಹಾಗೂ ಸುಳ್ಳು ಭರವಸೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ನಿರ್ಲಿಪ್ತಿತಾ ಭಾವನೆ ಇತ್ತು, ಬಿ.ವೈ. ವಿಜೇಂದ್ರ ಪಕ್ಷದ ಚುಕ್ಕಾಣಿ ಹಿಡಿದ ನಂತರ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದು ಬಿಜೆಪಿಗೆ ಶಕ್ತಿ ತುಂಬಿದ್ದಾರೆ ಎಂದು ಹೇಳಿದರು.
ಗ್ರಾಮ ಚಲೋ ಅಭಿಯಾನ, ಬೂತ್‌ಗೆ ಒಬ್ಬ ಕಾರ್ಯಕರ್ತನ ನೇಮಕ, ಪ್ರತಿ ಗ್ರಾಪಂಗೆ ವಾಟ್ಸಪ್ ಗ್ರೂಪ್ ರಚನೆ, ಗೋಡೆ ಬರಹ ಕೆಲಸದಲ್ಲಿ ಹರಪನಹಳ್ಳಿ ಮಂಡಲ ಘಟಕ ರಚನೆ ತಡವಾಯಿತು, ಸಂಘಟನೆ ನಿಧಾನವಾಯಿತು. ಇಂತಹ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಕುಡುಚಿ ಮಾಜಿ ಶಾಸಕ ಪಿ. ರಾಜೀವ ಇಲ್ಲಿಗೆ ಬಂದು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ರಾಜ್ಯಾಧ್ಯಕ್ಷರ ಗಮನಕ್ಕೆ ತಂದರು. ನಂತರ ಹರಪನಹಳ್ಳಿ ಮಂಡಲ ಅಧ್ಯಕ್ಷರನ್ನಾಗಿ ಕೆ. ಲಕ್ಷ್ಮಣ ಅವರನ್ನು ನೇಮಕ ಮಾಡಲಾಯಿತು ಎಂದು ಅಧ್ಯಕ್ಷರ ನೇಮಕ ಕುರಿತು ಮಾಹಿತಿ ನೀಡಿದರು.ಮಾ. 16ರಂದು ಶನಿವಾರ ಬೆಳಗ್ಗೆ 10.30ಕ್ಕೆ ನೂತನ ಮಂಡಲ ಅಧ್ಯಕ್ಷ ಕೆ. ಲಕ್ಷ್ಮಣ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಇಲ್ಲಿಯ ತರಳಬಾಳು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವ್ಯತ್ಯಾಸ ಆಗಿರಬಹುದು, ಕೆಲವರಿಗೆ ನೋವು ಆಗಿರಬಹುದು. ಎಲ್ಲಾ ಸರಿಪಡಿಸುವ ಕೆಲಸವನ್ನು ರಾಜ್ಯ ಮುಖಂಡರು ಮಾಡುತ್ತಾರೆ ಎಂದು ನುಡಿದರು.
ಈಚೆಗೆ ನೂತನವಾಗಿ ರಚಿತವಾದ ಇಲ್ಲಿಯ ಮಂಡಲ ಘಟಕದ ಹಾಗೂ ಜಿಲ್ಲಾ ಘಟಕದ ನಾಲ್ಕು ಜನ ಪದಾಧಿಕಾರಿಗಳು ಅಂದರೆ ಆರ್. ಲೋಕೇಶ, ಮತ್ತಿಹಳ್ಳಿ ಕೊಟ್ರೇಶ, ಮನೋಜಕುಮಾರ ತಳವಾರ, ಯು.ಎನ್. ಪ್ರವೀಣ ಅವರು ತಮ್ಮ ಸ್ಥಾನಗಳಿಗೆ ನೀಡಿದ ರಾಜಿನಾಮೆಗಳನ್ನು ಜಿಲ್ಲಾಧ್ಯಕ್ಷರು ಅಂಗೀಕರಿಸಿದ್ದಾರೆ, ಶೀಘ್ರವೇ ಖಾಲಿಯಾದ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಹರಪನಹಳ್ಳಿ ಬಿಜೆಪಿ ಮಂಡಲ ಘಟಕದ ನೂತನ ಅಧ್ಯಕ್ಷ ಕೆ.ಲಕ್ಷ್ಣಣ ಮಾತನಾಡಿ, ಕಳೆದ 32-33 ವರ್ಷದಿಂದ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ, ನನ್ನ ಸೇವೆ ಗುರುತಿಸಿ ಕೊಟ್ಚ ಹುದ್ದೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿದ್ದೇನೆ. ಈ ಹಿಂದೆ ಕಾರಣಾಂತರದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಈಗ ಪುನಃ ಮಂಡಲ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.