ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡಲು ಬಿಜೆಪಿ ಆಗ್ರಹ

KannadaprabhaNewsNetwork | Published : May 7, 2025 12:45 AM
Follow Us

ಸಾರಾಂಶ

ಚಿಕ್ಕಮಗಳೂರುಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನದ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡುವಂತೆ ಜಿಲ್ಲಾ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನದ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡುವಂತೆ ಜಿಲ್ಲಾ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ಜಮ್ಮು ಕಾಶ್ಮೀರದಲ್ಲಿ ಏ.22 ರಂದು ನಡೆದ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ಧರ್ಮ ಕೇಳಿ ಹತ್ಯೆಗೈದಿರುವುದು ಅತ್ಯಂತ ಧಾರಣ ಘಟನೆಯಾಗಿದೆ ಎಂದು ಹೇಳಿದರು.

ಈ ದಾಳಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ನೆರವಿನಿಂದ ಪಾಕಿಸ್ತಾನದ ಸೇನೆ ಇಡೀ ದಾಳಿಯ ಯೋಜನೆ ರೂಪಿಸಿ ಬರ್ಬರ ಹತ್ಯಾಕಾಂಡವನ್ನು ಅರಗಿಸಿಕೊಳ್ಳಲಾಗದೆ ಇಡೀ ದೇಶ ಅತ್ಯಂತ ದೊಡ್ಡ ಆಘಾತಕ್ಕೊಳ ಗಾಗಿದೆ. ಜಗತ್ತಿನ ಎಲ್ಲ ದೊಡ್ಡ ಶಕ್ತಿಶಾಲಿ ರಾಷ್ಟ್ರಗಳು ಭಾರತದ ಜೊತೆ ನಿಲ್ಲುವುದಾಗಿ ಘೋಷಿಸಿವೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಈ ಕೃತ್ಯದಲ್ಲಿ ಭಾಗಿಯಾಗಿರುವವರು ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಅವರನ್ನು ರಕ್ಷಣೆ ಮಾಡುವವರ ರುಂಡವನ್ನು ಚೆಂಡಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಈ ಸಂಬಂಧ ಭಾರತೀಯ ಸೇನಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅನುಮತಿ ನೀಡಿರುವುದರಿಂದ ಉಗ್ರರನ್ನು ನಾಶ ಮಾಡುತ್ತವೆ ಎಂಬ ದೃಢ ವಿಶ್ವಾಸವಿದೆ ಎಂದರು.

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅಧಿಕೃತ ದಾಖಲಾತಿಗಳಿಲ್ಲದೆ ಮಾನ್ಯತೆ ರದ್ದಾಗಿರುವ ವೀಸಾಗಳು ಹಾಗೂ ಅಮಾನತ್ತಿನಲ್ಲಿರುವ ವೀಸಾಗಳನ್ನು ಹೊಂದಿಕೊಂಡು ವಾಸಿಸುತ್ತಿರುವವರನ್ನು ಗುರುತಿಸಬೇಕೆಂದು ಮನವಿ ಮಾಡಿದರು.

ಇದು ಅತ್ಯಂತ ಪ್ರಬಲವಾದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಅಂತಹ ವ್ಯಕ್ತಿಗಳನ್ನು ಪಟ್ಟಿ ಮಾಡಿ ವಿಳಂಭ ಮಾಡದೆ ಈ ಕೂಡಲೇ ಎಲ್ಲಾ ಕಾನೂನು ಬದ್ಧವಾದ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸೂಕ್ಷ್ಮ ವಿಚಾರದ ಬಗ್ಗೆ ಜಿಲ್ಲೆಯ ಆಡಳಿತ ವ್ಯವಸ್ಥೆ ಶೀಘ್ರವಾಗಿ ಹಾಗೂ ನಿರ್ಣಾಯಕವಾದ ಕಾರ್ಯನಿರ್ವಹಿಸುವ ಮೂಲಕ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸಿ ಜನರ ವಿಶ್ವಾಸ ಬಲಗೊಳಿಸಿ ಹಾಗೂ ಸಮಯಾನುಸಾರ ದಕ್ಷ ಸುರಕ್ಷತಾ ವ್ಯವಸ್ಥೆಯನ್ನು ನಿರ್ವಹಿಸುತ್ತದೆಂದು ಆಶಿಸುತ್ತೇವೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಎ. ನರೇಂದ್ರ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಂ ಭರಣ್ಯ, ಜಿಲ್ಲಾ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಖಜಾಂಚಿ ನಾರಾಯಣಗೌಡ, ವಕ್ತಾರ ಎಚ್.ಎಸ್. ಪುಟ್ಟಸ್ವಾಮಿ, ನಗರ ಮಂಡಲ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್‌ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು. 6 ಕೆಸಿಕೆಎಂ 3ಪಾಕಿಸ್ತಾನದ ಪ್ರಜೆಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯರಡ್ಡಿ ಕನಕರಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.