ಹಿಂದೂ ಕಾರ್‍ಯಕರ್ತರ ಮೇಲೆ ಹಲ್ಲೆ ಆರೋಪಿಗಳ ಗಡಿಪಾರಿಗೆ ಬಿಜೆಪಿ ಆಗ್ರಹ

KannadaprabhaNewsNetwork |  
Published : Mar 24, 2026, 02:15 AM IST
ಚಿತ್ರ :  23ಎಂಡಿಕೆ4 : ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿದರು.  | Kannada Prabha

ಸಾರಾಂಶ

ಇತ್ತೀಚೆಗೆ ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳಿಗೆ ಷರತ್ತುಬದ್ಧವಾಗಿ ನೀಡಲಾಗಿರುವ ಜಾಮೀನನ್ನು ರದ್ದುಪಡಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇತ್ತೀಚೆಗೆ ನಾಪೋಕ್ಲಿನಲ್ಲಿ ಹಿಂದೂ ಸಂಗಮ ಪ್ರಚಾರದ ವೇಳೆ ನಡೆದ ಹಲ್ಲೆ ಪ್ರಕರಣದ ಆರೋಪಿಗಳಿಗೆ ಷರತ್ತುಬದ್ಧವಾಗಿ ನೀಡಲಾಗಿರುವ ಜಾಮೀನನ್ನು ರದ್ದುಪಡಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲುವಿನಲ್ಲಿ ಈಚೆಗೆ ಶಾಂತಿ ಕದಡುವ ಉದ್ದೇಶದಿಂದ ಹಿಂದೂ ಸಮಾಜೋತ್ಸವದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿತ್ತು. ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ಅವರು ಮತ್ತೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶಾಂತಿ ಕದಡುವ ಪೋಸ್ಟ್ ಮಾಡಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಅಥವಾ ಜಾಮೀನು ನಿರಾಕರಿಸಿ ಮತ್ತೆ ಜೈಲಿಗಟ್ಟಬೇಕು ಎಂದು ಆಗ್ರಹಿಸಿದರು.

ನಾಪೋಕ್ಲು ಸರ್ಕಾರಿ ಕಾಲೇಜಿಗೆ ಸಂಬಂಧಪಟ್ಟ ಜಾಗದಲ್ಲಿ ಅನಧಿಕೃತವಾಗಿ ಅತಿಕ್ರಮಿಸಿ ಶಾದಿಮಹಲ್ ನಿರ್ಮಾಣಕ್ಕೆ ಮುಂದಾದ ಸಂದರ್ಭ ಭಾರತೀಯ ಜನತಾ ಪಾರ್ಟಿ ಪ್ರತಿಭಟಿಸಿತ್ತು. ಈ ಸಂದರ್ಭ ತಾತ್ಕಾಲಿಕವಾಗಿ ಕಾಮಗಾರಿಯನ್ನು ತಡೆ ಮಾಡಿ ಸರ್ವೆ ಕಾರ್ಯ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಅತಿಕ್ರಮಣದ ತೆರವು ಕಾರ್ಯ ಇಲ್ಲಿಯವರೆಗೆ ಆಗಿಲ್ಲ. ಈ ಎಲ್ಲ ಕೃತ್ಯಗಳು ಯಾರ ಕುಮ್ಮಕು ಮತ್ತು ಬೆಂಬಲದಿಂದ ನಡೆಯುತ್ತಿದೆ ಎಂಬುವುದನ್ನು ಜಿಲ್ಲೆಯ ಜನತೆ ಅರಿತುಕೊಳ್ಳಬೇಕಾಗಿದೆ ಎಂದರು.

ಜನರಿಗೆ ಸಮಸ್ಯೆ ಆದಾಗ ಪ್ರತಿಭಟನೆ ಮಾಡುವುದು ಪ್ರತಿ ಪಕ್ಷದ ಕರ್ತವ್ಯ ಎಂದ ಅವರು, ಎಷ್ಟೋ ಜನರು ಆನೆ ದಾಳಿಗೆ ಸತ್ತರೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕೆ? ಸರ್ಕಾರದ ಗಮನ ಸೆಳೆಯಬಾರದೆ? ಎಂದು ಪ್ರಶ್ನಿಸಿದ ಅವರು, ನಾವು ಪ್ರತಿಭಟನೆ ಮಾಡಿದ್ದರಿಂದ ಅರಣ್ಯ ಸಚಿವರು ಎಚ್ಚೆತ್ತುಕೊಂಡು ಸಭೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನ ಮುಖಂಡರನ್ನು ಒಳಗೊಂಡಂತೆ ಸಭೆ ನಡೆಸಬೇಕು ಎಂದು ಆಗ್ರಹಿಸಿದರು.

ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂಬ ಕಾಂಗ್ರೆಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲಿ ಬಿಜೆಪಿ ಸರ್ಕಾರ ಇಲ್ಲ. ಅಲ್ಲಿನ ಸರ್ಕಾರ ಕೇಂದ್ರದ ಗಮನ ಸೆಳೆದು ಅನುದಾನ ತೆಗೆದುಕೊಂಡಿದ್ದಾರೆ. ಇಲ್ಲಿನ ಸರ್ಕಾರಕ್ಕೆ ಆ ಸಾಮರ್ಥ್ಯ ಇಲ್ಲ. ಇಲ್ಲಿನ ಸರ್ಕಾರವೂ ಸಂಸದರೊಂದಿಗೆ ತೆರಳಿ ಕೇಂದ್ರದಿಂದ ಅನುದಾನ ತರಲು ಪ್ರಯತ್ನ ಮಾಡಿಲ್ಲ. ಪರಿಣಾಮ ಅನುದಾನ ಬರುತ್ತಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಹಿಂದೆ ಅನೇಕ ಕೆಲಸ ಮಾಡಿದಾಗ ನಮ್ಮ ಬಿಜೆಪಿ ಶಾಸಕರು ಫೋಟೊ ಹಾಕಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿ ಸರ್ಕಾರವಿದ್ದ ಸಂದರ್ಭ ನಿರ್ಮಾಣ ಮಾಡಿದ ಕಟ್ಟಡ ಕಾಮಗಾರಿಗಳಿಗೆ ಇಂದು ಕಾಂಗ್ರೆಸಿಗರು ಬಣ್ಣ ಬಳಿದು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮಾಜಿ ಸಚಿವ ಅಪ್ಪಚ್ಚುರಂಜನ್ ಮಾತನಾಡಿ, ಅನಿಲ ಉತ್ಪಾದನೆ ನಮ್ಮ ದೇಶದಲ್ಲಿ ಇಲ್ಲ. ಕೊಲ್ಲಿ ದೇಶದಲ್ಲಿ ಇಂದು ಯುದ್ಧ ನಡೆಯುತ್ತಿದ್ದರೂ ಚೈನಾಗೆ ಹೋಗುವ ಟ್ಯಾಂಕರ್ ನಮ್ಮಲ್ಲಿಗೆ ತರಿಸುವ ಪ್ರಯತ್ನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಇಂದು ರಸ್ತೆಯಲ್ಲಿ ಸಿಲಿಂಡರ್ ಇಟ್ಟು ಪ್ರತಿಭಟನೆ ಮಾಡುತ್ತಿದೆ ಎಂದು ಟೀಕಿಸಿದರು.

ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಯುದ್ಧಕ್ಕೆ ನಾವು ಕಾರಣರಲ್ಲ. ಆದರೆ, ಮೋದಿ ಚಾಕ ಚಕ್ಯತೆಯಿಂದ ಇಂದು ಅನಿಲ, ತೈಲ ಭಾರತಕ್ಕೆ ಬರುವಂತಾಗಿದೆ. ದೇಶ ಸಂಕಷ್ಟದಲ್ಲಿದ್ದಾಗ ದೇಶದ ಪರ, ಸರ್ಕಾರದ ಪರ ಇರಬೇಕು. ಮೋದಿ ಅವರನ್ನು ಅಭಿನಂದಿಸುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಇಂದಿರಾ ಗಾಂಧಿ ಅವರನ್ನು ಯುದ್ಧದ ಸ್ಥಿತಿಯಲ್ಲಿ ವಾಜಪೇಯಿ ಶ್ಲಾಘಿಸಿದ್ದರು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಜೈನಿ, ಮಾದ್ಯಮ ಪ್ರಮುಖ್ ಸಜಿಲ್ ಕೃಷ್ಣ, ವಕ್ತಾರ ಅರುಣ್ ಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ದರ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ನಮ್ಮೂರ ಸರ್ಕಾರಿ ಶಾಲೆ ಉಳಿಸಿ: ಎಐಎಸ್‌ಎಫ್‌ ಹೋರಾಟ