ಇಂದು ಕೋಟಿಹಾಳ ಗ್ರಾಮದೇವತೆ ಜಾತ್ರೆ

KannadaprabhaNewsNetwork |  
Published : Mar 24, 2026, 02:15 AM IST
ಹೂವಿನಹಡಗಲಿ ತಾಲೂಕಿನ ಕೋಟಿಹಾಳು ಗ್ರಾಮದ ಗ್ರಾಮ ದೇವತೆ ಮೂರ್ತಿ.  | Kannada Prabha

ಸಾರಾಂಶ

ಮಾ.24, 25ರಂದು ಎರಡು ದಿನಗಳ ಕಾಲ ಗ್ರಾಮದೇವತೆ ಜಾತ್ರೆ ಅದ್ಧೂರಿಯಾಗಿ ಜರುಗಲಿದೆ.

ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದ ಕೋಟಿಹಾಳು ಪುಟ್ಟ ಗ್ರಾಮದಲ್ಲಿ ಮಾ.24ರಂದು ಗ್ರಾಮದೇವತೆ ಜಾತ್ರೆ ಜರುಗಲಿದೆ. ಮಾ.24, 25ರಂದು ಎರಡು ದಿನಗಳ ಕಾಲ ಗ್ರಾಮದೇವತೆ ಜಾತ್ರೆ ಅದ್ಧೂರಿಯಾಗಿ ಜರುಗಲಿದೆ. ದೇವಸ್ಥಾನದಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.

ಕೋಟಿಹಾಳು ಪುಟ್ಟ ಗ್ರಾಮವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖ ಕಂದಾಯ ಗ್ರಾಮವಾಗಿತ್ತು. ಆರನೇ ವಿಕ್ರಮಾದಿತ್ಯನ ಕಾಲದಲ್ಲಿ ಬಹಳ ಪ್ರಖ್ಯಾತಿ ಪಡೆದಿತ್ತು. ವಿಜಯನಗರ ಅರಸರ ಕಾಲದಲ್ಲೂ ತನ್ನ ಖ್ಯಾತಿ ಉಳಿಸಿಕೊಂಡು ಬಂದಿತ್ತು. ಇಂತಹ ಕೋಟಿಹಾಳ ಗ್ರಾಮ ಕಾಲ ಕಳೆದಂತೆ ಅಲ್ಲಿನ ಮಾಂಡಲೀಕನ ಉಪಟಳ ತಾಳಲಾರದೇ ಜನ ಗ್ರಾಮ ತೊರೆದಿದ್ದಾರೆಂದು ಇತಿಹಾಸ ಹೇಳುತ್ತದೆ‌. ಕಾಲ ಕ್ರಮೇಣ ಜನವಸತಿ ಕಡಿಮೆಯಾದ ಪರಿಣಾಮ ಪುಟ್ಟ ಹಳ್ಳಿಯಾಗಿ ಉಳಿದುಕೊಂಡಿದೆ. ಈ ಕುರಿತು ಶಿಲಾ ಶಾಸನಗಳು ಲಭ್ಯವಿದೆ. ಇಂತಹ ಗ್ರಾಮಕ್ಕೆ 11-09-1966ರ ಭಾನುವಾರ ಬೆಳಗ್ಗೆ ಪೆಟ್ಟಿಗೆಯೊಂದು ತುಂಗಭದ್ರಾ ನದಿಯಲ್ಲಿ ತೇಲಿ ಬರುತ್ತದೆ. ಅದು ಈಗಿನ ಗದಗ ಜಿಲ್ಲಾ ಗದಗ ತಾಲೂಕಿನ ನೀಲಗುಂದ ಗ್ರಾಮದವರು ತಂದು ನದಿಯಲ್ಲಿ ಬಿಟ್ಟ ಗ್ರಾಮದೇವತೆಯ ಮೂರ್ತಿ ಇದ್ದ ಪೆಟ್ಟಿಗೆಯಾಗಿತ್ತು. ಈ ಪೆಟ್ಟಿಗೆ ಕೋಟಿಹಾಳು ಗ್ರಾಮದ ಬಳಿ ತೇಲಿ ಬಂದಿತು. ಇದನ್ನು ಕುರುವತ್ತಿಯ ಶಿವಾಚಾರ್ಯರು, ಹಿರೇಮಠದ ದೊಡ್ಡಮನಿ ಕೊಟ್ರಬಸವನಗೌಡ ನೇತೃತ್ವದಲ್ಲಿ ಹೊರ ತರಲಾಯಿತು. 12.09.1966ರಂದು ಸಂಜೆ ಆಂಜನೇಯ ದೇವಸ್ಥಾನದ ಬಲಭಾಗದಲ್ಲಿ ವಿಧಿಪೂರ್ವಕವಾಗಿ ಪ್ರತಿಷ್ಠಾಪಿಸಲಾಯಿತು.

ನಂತರ ತುಂಗಭದ್ರಾ ನದಿ ದಂಡೆಯಲ್ಲಿ ದೇವಸ್ಥಾನ ನಿರ್ಮಿಸಿ ಅಲ್ಲಿಗೆ ದೇವಿ ಮೂರ್ತಿ ಸ್ಥಳಾಂತರಿಸಲಾಯಿತು. ಅದೇ ವರ್ಷ ಜಾತ್ರೆ ನಡೆಯಿತು. ಆಗ ಸಹಾಯಕ ಶಿಕ್ಷಣ ಸಚಿವರಾಗಿದ್ದ ಎನ್.ಎಂ. ಕೊಟ್ರಬಸಯ್ಯ ಸೋಗಿ, ಪಕ್ಕದ ಶಿರಹಟ್ಟಿಯ ಅಂದಿನ ಶಾಸಕ ಕಾಶಿ ಮಠದ ಸಿದ್ದಯ್ಯ ಜಾತ್ರೆಯಲ್ಲಿ ಭಾಗವಹಿಸಿದ್ದರು. ಗ್ರಾಮಕ್ಕೆ ಕಿರಿಯ ಪ್ರಾಥಮಿಕ ಶಾಲೆ ಮಂಜೂರು ಮಾಡಿದ್ದರು. 1966 ,1967, 1968ರಲ್ಲಿ ಮೂರು ಬಾರಿ ಜಾತ್ರೆ ನಡೆದು ಕಾರಣಾಂತರಗಳಿಂದ ನಿಂತು ಹೋಯಿತು. ನಂತರದಲ್ಲಿ ಮತ್ತೆ 2011ರಲ್ಲಿ 42 ವರ್ಷಗಳ ನಂತರ ಅಂಗೂರಿನ ಹಾಗೂ ಮಾನಿಹಳ್ಳಿ ಶ್ರೀಗಳ ಸಮ್ಮುಖದಲ್ಲಿ ಜಾತ್ರೆ ಪುನಾರಂಭಗೊಂಡಿತು. ಇಂತಹ ಭವ್ಯ ಇತಿಹಾಸ ಹೊಂದಿರುವ ದ್ಯಾಮವ್ವದೇವಿಯ ಜಾತ್ರಾ ಮಹೋತ್ಸವದ ಇತಿಹಾಸ ಕುರಿತು ಮುರಳಿ ಆಚಾರ್ಯ, ಪ್ರಾಚ್ಯವಸ್ತು ಇಲಾಖೆ, ಹಂಪಿ ವಿಶ್ವವಿದ್ಯಾಲಯದಿಂದ ಹಾಗೂ ಗ್ರಾಮಸ್ಥರ ನೆರವಿನಿಂದ ಸಮಗ್ರ ಮಾಹಿತಿ ಸಂಗ್ರಹಿಸಿ ದಾಖಲೆಗಳ ಸಮೇತ ಮಾಹಿತಿ ನೀಡಿದ್ದಾರೆ. ಪ್ರತಿ 3 ವರ್ಷಗಳಿಗೊಮ್ಮೆ ದೇವಿಜಾತ್ರೆ ನಡೆದು ಬಂದಿದೆ. ಮಾ.24ರಂದು ದೇವಿಯ ಜಾತ್ರೆ ವಿಜೃಂಭಣೆಯಿಂದ ನೆರವೇರಲಿದೆ. ಪ್ರಾತಃಕಾಲ ಅಂಗೂರಿನ ಶಿವಯೋಗಿಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಅಭಿಷೇಕ ನೆರವೇರಲಿದೆ. ಸಂಜೆ ಗಂಗಾ ಪೂಜೆ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮಾಷಾ ಮದ್ದು ಮಸಿ ಸುಡುತ್ತಾ, ಮೆರವಣಿಗೆ ಮುಖಾಂತರ ದೇವಿ ಕರೆತರುವುದು. ಹಿರೇಮಠದ ದೊಡ್ಡಮನಿ ಕೊಟ್ರಗೌಡ ತಂದೆ ಕೊಟ್ರಬಸವನಗೌಡ್ರು ಅವರ ಕುಟುಂಬಸ್ಥರ ಮನೆಯಲ್ಲಿ ಉಡಿ ತುಂಬಿಸಿಕೊಂಡು, ನಂತರ ದೇವಿಯ ವಂಶಪಾರಂಪರ್ಯ ಅರ್ಚಕ ಶಾಂತಮ್ಮ ದಿ.ವೀರಣ್ಣ ಆಚಾರ್ಯ ಪತ್ತಾರ ಅವರ ಮನೆಯಿಂದ ಮೀಸಲು ನೈವೇದ್ಯ ಸಮರ್ಪಿಸಲಾಗುತ್ತದೆ. ನಂತರ ಚೌತಮನೆ ಕಟ್ಟೆಯಲ್ಲಿ ಬೆಳಗಿನಜಾವ 4 ಗಂಟೆಗೆ ಕೂರಿಸಲಾಗುತ್ತದೆ. ನಂತರ ಸಾಂಕೇತಿಕ ಕುಷ್ಮಾಂಡ ಬಲಿ (ಕುಂಬಳಕಾಯಿ) ನೀಡಲಾಗುತ್ತದೆ.

ದೇವಿ ಜಾತ್ರೆ ಎಂದರೆ ಪ್ರಾಣಿಬಲಿ ನೀಡುವುದು ಸರ್ವೇ ಸಾಮಾನ್ಯ. ಆದರೆ ಜಾತ್ರೆಯಲ್ಲಿ ಪ್ರಾಣಿಬಲಿಗೆ ನಿಷೇಧವಿದೆ. ಹೋಳಿಗೆ, ಕಡುಬು, ಪಾಯಸ, ತುಪ್ಪ ಹೀಗೆ ಸಾತ್ವಿಕ ನೈವೇದ್ಯ ನೀಡುವ ಮೂಲಕ ಹುಗ್ಗಿ ಹೋಳಿಗೆ ಜಾತ್ರೆ ಎಂತಲೇ ಪ್ರಖ್ಯಾತಿ ಪಡೆದಿದೆ.

ಶಿರಸಿಯಲ್ಲಿ ಗಾಂಧೀಜಿ ಭೇಟಿ ನಂತರ ಪ್ರಾಣಿ ಬಲಿ ನಿಂತಿದ್ದು ಇತಿಹಾಸವಾದರೆ, ಇಲ್ಲೂ ಸಹ ಪ್ರಾಣಿ ಬಲಿ ಇಲ್ಲದೇ ಜಾತ್ರೆ ನಡೆಯುವುದೇ ವಿಶೇಷ. ಮಾ.25ರಂದು ಸಂಜೆ ದೇವಿಯನ್ನು ಗಡಿಗೆ ಕಳುಹಿಸುವ ಆಚರಣೆ ನಂತರ ಗುಡಿ ತುಂಬಿಸುವುದು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.27ರಂದು ಪುನರ್ ಪ್ರತಿಷ್ಠಾಪನೆ ಅಭಿಷೇಕ, ಪೂಜಾ ವಿಧಿ ವಿಧಾನಗಳಿಗೆ ಚಾಲನೆ ದೊರೆಯಲಿದೆ ಎಂದು ಗ್ರಾಮದೇವತಾ ಜಾತ್ರಾ ಮಹೋತ್ಸವ ಸಮಿತಿಯವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ದರ ಏರಿಕೆ: ಕಾಂಗ್ರೆಸ್ ಪ್ರತಿಭಟನೆ
ನಮ್ಮೂರ ಸರ್ಕಾರಿ ಶಾಲೆ ಉಳಿಸಿ: ಎಐಎಸ್‌ಎಫ್‌ ಹೋರಾಟ