ಅಮೆರಿಕದ ಪ್ರಸಿದ್ಧ ಕಂಪನಿ ಹೆಸರಿನಲ್ಲಿ ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದ 4 ನಕಲಿ ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಮೆರಿಕದ ಪ್ರಸಿದ್ಧ ಕಂಪನಿ ಹೆಸರಿನಲ್ಲಿ ಅಮೆರಿಕದ ನಾಗರಿಕರನ್ನು ವಂಚಿಸುತ್ತಿದ್ದ 4 ನಕಲಿ ಕಾಲ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿರುವ ಸೈಬರ್ ಕ್ರೈಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ನಕಲಿ ಕಾಲ್ ಸೆಂಟರ್‌ನ ನಿರ್ದೇಶಕರಾದ ದೆಹಲಿ ಮೂಲದ ಪ್ರಶಾಂತ್ ಮತ್ತು ಉತ್ತರ ಪ್ರದೇಶ ಮೂಲದ ಆಕಾಶ್ ಗುಪ್ತ ಬಂಧಿತರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಆರೋಪಿಗಳಿಂದ ಅಮೆರಿಕದ ನಾಗರಿಕರನ್ನು ವಂಚಿಸಲು ಬಳಸಲಾಗಿದ್ದ 44 ಸಾಲಿಡ್ ಸ್ಟೇಟ್ ಡ್ರೈವ್ಸ್ (ಎಸ್‌ಎಸ್‌ಡಿ) 2 ಮೊಬೈಲ್ ಫೋನ್‌ಗಳು, 2 ಲ್ಯಾಪ್‌ಟಾಪ್ 9 ಸಿಪಿಯುಗಳು ಹಾಗೂ ಸ್ಕ್ರೀಪ್ಟ್ ನೋಟ್ ಬುಕ್ ಸೇರಿದಂತೆ ಇತರೆ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ನಕಲಿ ಕಾಲ್ ಸೆಂಟರ್‌ಗಳನ್ನು ತೆರೆದು ನಾಗರಿಕರನ್ನು ವಂಚಿಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ವಿಶೇಷ ಸೈಬರ್ ಸೆಲ್ ಸಿಬ್ಬಂದಿ ಕೋರಮಂಗಲದ ಎರಡು ಕಡೆ, ಚೂಡಸಂಧ್ರ, ಪರಪ್ಪನ ಅಗ್ರದಲ್ಲಿರುವ ಒಟ್ಟು 4 ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾಗ ನಕಲಿ ಕಾಲ್‌ಸೆಂಟರ್‌ಗಳ ಬಣ್ಣ ಬಯಲಾಗಿದೆ.ಕ್ಲಿಕ್ ಬುಕ್ ಹೆಸರಿನಲ್ಲಿ ಕಾರ್ಯನಿರ್ವಹಣೆ:
ಅಮೆರಿಕದ ಪ್ರಸಿದ್ದ ಲೆಕ್ಕಪತ್ರ ಸಂಸ್ಥೆಯಾದ ಕ್ಲಿಕ್ ಬುಕ್ ಹೆಸರಿನಲ್ಲಿ ನಗರದಲ್ಲಿ 4 ನಕಲಿ ಕಾಲ್ ಸೆಂಟರ್ ತೆರೆದು ವಂಚಿಸುತ್ತಿದ್ದರು. ಈ ಕಂಪನಿ ಅಮೆರಿಕದ ಆದಾಯ ತೆರಿಗೆ ಬಗ್ಗೆ ಆನ್‌ಲೈನ್ ಸರ್ವೀಸ್ ಕೊಡುವಂತಹ ಕಂಪನಿಯಾಗಿದೆ. ಇದರ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್‌ಗಳನ್ನು ತೆರೆದು ಹಲವು ಅಮೇರಿಕಾದ ನಾಗರಿಕರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಸರ್ಕಲ್ ಸ್ಕೈಯರ್ ಎಲ್‌ಎಲ್‌ಸಿ ಎಂಬ ಕಂಪನಿಯನ್ನು ಸ್ಥಾಪಿಸಿದ್ದು, ವಿವಿಧ ಶೆಲ್ ಕಂಪನಿಗಳ ಮೂಲಕ ಅಮೆರಿಕ ನಾಗರಿಕರನ್ನು ವಂಚಿಸಿ ಅಪಾರ ಪ್ರಮಾಣದ ಹಣವನ್ನು ವರ್ಗಾಯಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಿಬ್ಬಂದಿಗೆ ವ್ಯವಸ್ಥಿತ ತರಬೇತಿ:ಕೋರಮಂಗಲದ ಎರಡು ಕಡೆ, ಚೂಡಸಂಧ್ರ, ಪರಪ್ಪನ ಅಗ್ರಹಾರದಲ್ಲಿರುವ ಒಟ್ಟು 4 ನಕಲಿ ಕಾಲ್ ಸೆಂಟರ್‌ನಲ್ಲಿ ಸುಮಾರು 120 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಇಲ್ಲಿನ ಸಿಬ್ಬಂದಿಗೆ ಯಾವ ರೀತಿ ವಂಚನೆ ಮಾಡಬೇಕು ಎಂಬುದನ್ನು ವ್ಯವಸ್ಥಿತ ರೀತಿಯಲ್ಲಿ ತರಬೇತಿ ನೀಡಲಾಗಿತ್ತು. ಸ್ಕ್ರೀಪ್ಟ್ ನೋಟ್‌ಗಳನ್ನು ನೀಡಿ ವಂಚಿಸುವ ವಿಧಾನಗಳನ್ನು ಕಲಿಸಲಾಗಿತ್ತು. ಅಮೇರಿಕಾದ ಭಾಷೆಯನ್ನು ಯಾವ ರೀತಿ ಮಾತನಾಡಬೇಕು ಎಂಬುದನ್ನು ಹೇಳಿಕೊಡಲಾಗಿತ್ತು. ರವಿ ಅಂಥಾ ತಮ್ಮ ಹೆಸರಿದ್ದರೆ ಅದನ್ನು ಮ್ಯಾಕ್ ಎಂದು ಬದಲಾಯಿಸಿ ಹೇಳುತ್ತಿದ್ದರು. ನಕಲಿ ಇನ್ ಕಂ ಟ್ಯಾಕ್ಸ್ ನೋಟಿಸ್ ಕಳುಹಿಸುತ್ತಿದ್ದರು. ಇದರಿಂದ ಬೆದರಿದವರು ಈ ನಕಲಿ ಕಂಪನಿಯನ್ನು ಸಂಪರ್ಕಸಿದ್ದಾಗ ಅವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ ಡಾ.ಪ್ರಣವ್ ಮೊಹಾಂತಿ ಅವರ ಮಾರ್ಗದರ್ಶನದಲ್ಲಿ ಸೈಬರ್ ಕಮಾಂಡ್ ಸೆಂಟರ್ ಡಿಐಜಿಪಿ ಎಚ್.ಡಿ ಆನಂದ್ ಕುಮಾರ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.₹40 ಕೋಟಿ ವಂಚನೆ
ಈ ನಕಲಿ ಕಾಲ್ ಸೆಂಟರ್‌ಗಳು ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಕೇವಲ 2 ತಿಂಗಳ ಅವಧಿಯಲ್ಲಿ ಅಮೆರಿಕ ಪ್ರಜೆಗಳಿಂದ ಸುಮಾರು ₹40 ಕೋಟಿಯಷ್ಟು ವಹಿವಾಟಿನ ವಂಚನೆ ವಿವರ ನಮಗೆ ಸಿಕ್ಕಿದೆ. ಕಳೆದ 4 ವರ್ಷಗಳಿಂದ ಎಷ್ಟು ಪ್ರಮಾಣದಲ್ಲಿ ವಂಚನೆ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿಗಳ ಹಣದ ಮೂಲದ ಬಗ್ಗೆ, ಯಾವ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು ಮತ್ತು ಹಣದ ವಿಲೇವಾರಿ ಹೇಗೆ ನಡೆದಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
-ಡಾ.ಪ್ರಣವ್ ಮೊಹಾಂತಿ, ಸೈಬರ್ ಕಮಾಂಡ್ ಸೆಂಟರ್ ಡಿಜಿಪಿ