ನಗರದಲ್ಲಿ 22 ದಿನಗಳ ನಂತರ ಗುರುವಾರ ಸಂಜೆ ಮತ್ತೊಮ್ಮೆ ಸುರಿದ ಗುಡುಗು ಸಹಿತ ಬಿರುಗಾಳಿ, ಮಳೆಗೆ ಹಲವೆಡೆ ಮರಗಳು ಬಿದ್ದು ಕಾರು, ದ್ವಿಚಕ್ರ ವಾಹನ ಸೇರಿ ಹಲವು ವಾಹನಗಳು ಜಖಂಗೊಂಡಿದ್ದು, ನಗರದ ಪ್ರಮುಖ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿದ್ದಲ್ಲದೆ, ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಪರದಾಡಬೇಕಾಯಿತು.

ಕನ್ನಡ ಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ 22 ದಿನಗಳ ನಂತರ ಗುರುವಾರ ಸಂಜೆ ಮತ್ತೊಮ್ಮೆ ಸುರಿದ ಗುಡುಗು ಸಹಿತ ಬಿರುಗಾಳಿ, ಮಳೆಗೆ ಹಲವೆಡೆ ಮರಗಳು ಬಿದ್ದು ಕಾರು, ದ್ವಿಚಕ್ರ ವಾಹನ ಸೇರಿ ಹಲವು ವಾಹನಗಳು ಜಖಂಗೊಂಡಿದ್ದು, ನಗರದ ಪ್ರಮುಖ ಅಂಡರ್ ಪಾಸ್ ಗಳಲ್ಲಿ ನೀರು ತುಂಬಿದ್ದಲ್ಲದೆ, ರಸ್ತೆಯಲ್ಲೆಲ್ಲಾ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ಪರದಾಡಬೇಕಾಯಿತು.

ಸಂಜೆ ಜನರು ಕೆಲಸ ಮುಗಿಸಿ ಮನೆಗಳಿಗೆ ತೆರಳುತ್ತಿದ್ದ ಸಮಯ ತುಂತುರು ಹನಿಗಳಿಂದ ಆರಂಭವಾದ ಮಳೆ ಬಿರುಸಿನಿಂದ ಆಲಿಕಲ್ಲು ಸಹಿತ ರಭಸವಾಗಿ ಸುರಿಯಲು ಆರಂಭಿಸಿತು. ಮಳೆಗೆ ವಾಹನ ಸವಾರರು ಅಲ್ಲಲ್ಲಿ ಆಶ್ರಯ ಪಡೆದುಕೊಂಡರೆ, 10 ನಿಮಿಷಗಳ ನಂತರ ಗಾಳಿ ಬೀಸುತ್ತಿದ್ದಂತೆ ಅಲ್ಲಲ್ಲಿ ಮರಗಳು ಧರೆಗೆ ಉರುಳಿವೆ. ಸುಮಾರು 58 ನಿಮಿಷಗಳ ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.

ಕೆ.ಆರ್.ವೃತ್ತದ ಸಮೀಪ ಅಂಡರ್ ಪಾಸ್ ನಲ್ಲಿ ನೀರು ತುಂಬಿದ ಪರಿಣಾಮ ವಾಹನಗಳು ಸಂಚರಿಸಲು ಸಾಧ್ಯವಾಗದೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಶೇಷಾದ್ರಿಪುರಂ ಸಮೀಪ ರೈಲ್ವೆ ಅಂಡರ್ ಪಾಸ್ ನಲ್ಲಿಯೂ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಮಳೆಯಿಂದ ಮೆಜೆಸ್ಟಿಕ್, ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿರಸ್ತೆ, ವಿಧಾನಸೌಧ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಚರಂಡಿ ನೀರು ಮಳೆ ನೀರು ರಸ್ತೆ ತುಂಬಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು.

ಇಂದಿರಾನಗರ ನಗರದಲ್ಲಿ ಬೃಹತ್ ಮರಬಿದ್ದು ಕಾರು ಜಖಂಗೊಂಡಿದ್ದು, ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಸಮೀಪ ಮರವೊಂದು ಧರೆಗುರುಳಿದೆ. ಕೆ.ಆರ್.ಪುರಂನ ದೂರವಾಣಿ ನಗರದಲ್ಲಿ ಮರ ಹಾಗೂ ವಿದ್ಯುತ್ ಕಂಬ ರಸ್ತೆ ಮಧ್ಯೆಯೇ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಸ್ಥಳೀಯರು ಆತಂಕಗೊಂಡಿದ್ದು, ಪೊಲೀಸರು ಹಾಗೂ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದರು.

ವೃಷಭಾವತಿಗೆ ಮತ್ತೇ ಹೂಳು

ಮಹದೇವಪುರದಲ್ಲಿ ಗಾಳಿಗೆ ಬೃಹತ್ ಮರ ಉರುಳಿಬಿದ್ದ ಪರಿಣಾಮ ಆರು ಕಾರುಗಳು, 2 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಕ್ವೀನ್ಸ್ ರಸ್ತೆಯಲ್ಲಿ ಮರದ ಕೊಂಬೆ ಬಿದ್ದು ಸಂಚಾರ ಅಡಚಣೆ ಉಂಟಾಗಿತ್ತು. ಗಾಳಿ ಆಂಜನೇಯ ಸ್ವಾಮಿ ದೇಗುಲದಲ್ಲಿ ವೃಷಭಾವತಿ ನದಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯುತ್ತಿತ್ತು ಮಳೆಯಿಂದಾಗಿ ಹೂಳು ಮತ್ತೊಮ್ಮೆ ಮೋರಿ ಸೇರಿಕೊಂಡಿದೆ. ವಿಷಯ ತಿಳಿದ ಕೂಡಲೆ ಪಾಲಿಕೆ ಸಿಬ್ಬಂದಿ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಲು ಆರಂಭಿಸಿದರು.

ರಸ್ತೆಗಳಲ್ಲಿ ನದಿ ಸೃಷ್ಟಿನಗರದ ಮೆಜೆಸ್ಟಿಕ್, ಶ್ರೀರಾಂಪುರ, ವಿಜಯನಗರ, ಜಯನಗರ, ಜೆ.ಪಿ.ನಗರ, ಮಹದೇವಪುರ, ಮಲ್ಲೇಶ್ವರಂ, ರಾಜಾಜಿನಗರ, ಆರ್.ಟಿ.ನಗರ, ಸದಾಶಿವನಗರ, ಯಶವಂತಪುರ ಸೇರಿದಂತೆ ಹಲವೆಡೆ ನೀರು ರಸ್ತೆಯಲ್ಲೆಲ್ಲಾ ನದಿಯಂತೆ ಹರಿಯತೊಡಗಿದೆ. ಇದರಿಂದಾಗಿ ವಾಹನ ಸವಾರರು ಹಿಂದೆ ಹೋಗಲೂ ಆಗದೆ ಮುಂದುವರಿಯಲೂ ಆಗದೆ ರಸ್ತೆ ಮಧ್ಯೆಯೇ ಸಿಲುಕಬೇಕಾಯಿತು.

ಇನ್ನೂ ಮೂರು ದಿನ ಮಳೆ

ಇನ್ನೂ ಮೂರು ದಿನ ನಗರ ಹಾಗೂ ರಾಜ್ಯದಾದ್ಯಂತ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದ್ದು, ಮುಂಗಾರು ಮಳೆ ಆರಂಭವಾಗುವವರೆಗೂ ಆಲಿಕಲ್ಲು ಮಳೆ ಬೀಳುವುದು ಸಾಮಾನ್ಯ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಧಿಕ ಉಷ್ಣಾಂಶ ಇರುವ ಸಮಯದಲ್ಲಿ ಆಲಿಕಲ್ಲು ಬೀಳುತ್ತದೆ. ಇದಕ್ಕಾಗಿ ಆತಂಕಪಡುವ ಅಗತ್ಯವಿಲ್ಲ. ಇದೇ ತಿಂಗಳ 24ಕ್ಕೆ ಅಥವಾ ಇದಾದ 4 ದಿನಗಳ ನಂತರ ಮುಂಗಾರು ರಾಜ್ಯಕ್ಕೆ ಪ್ರವೇಶಸುವ ನಿರೀಕ್ಷೆ ಇದ್ದು, ಕೇರಳಕ್ಕೆ ಮೊದಲು ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞೆ ಡಾ.ಲತಾ ಕನ್ನಡಪ್ರಭಕ್ಕೆ ತಿಳಿಸಿದರು.44.2 ಮಿಲಿಮೀಟರ್ ಮಳೆ

ಗುರುವಾರ (ಮೇ21) ನಗರದಲ್ಲಿ ಸರಾಸರಿ 44.2 ಮಿಲಿಮೀಟರ್ ಮಳೆಯಾಗಿದೆ. ಏಪ್ರಿಲ್ 29ರಂದು ನಗರದಲ್ಲಿ 111.5 ಮಿಲಿಮೀಟರ್ ಮಳೆಯಾಗಿತ್ತು.