ಬಕ್ರಿದ್ ಹಬ್ಬದ ವೇಳೆ ರಾಜ್ಯದಲ್ಲಿ ಅಕ್ರಮ ಗೋಸಾಗಾಟ, ಕಾನೂನು ಬಾಹಿರ ಗೋಹತ್ಯೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ರಸ್ತೆಗಳನ್ನು ಬಂದ್ ಮಾಡಿ ನಮಾಜ್ ಮಾಡುವುದನ್ನು ತಡೆಯುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಗೃಹ ಸಚಿವರಿಗೆ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಕ್ರಿದ್ ಹಬ್ಬದ ವೇಳೆ ರಾಜ್ಯದಲ್ಲಿ ಅಕ್ರಮ ಗೋಸಾಗಾಟ, ಕಾನೂನು ಬಾಹಿರ ಗೋಹತ್ಯೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ರಸ್ತೆಗಳನ್ನು ಬಂದ್ ಮಾಡಿ ನಮಾಜ್ ಮಾಡುವುದನ್ನು ತಡೆಯುವಂತೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಗೃಹ ಸಚಿವರಿಗೆ ಮನವಿ ಮಾಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಯವರ ಮೂಲಕ ರಾಜ್ಯದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಪತ್ರ ನೀಡಿ ಮಾತನಾಡಿದ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ಬಕ್ರಿದ್ ಹಬ್ಬದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋವು, ಎಮ್ಮೆ ಹಾಗೂ ಕರುಗಳ ಸಾಗಾಟ ನಡೆಯುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾವಹಿಸುವ ಅಗತ್ಯವಿದೆ ಎಂದರು.

ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದರೂ ಸಹ, ಕೆಲವು ಕಡೆಗಳಲ್ಲಿ ರಸ್ತೆ ಬದಿ, ಜನವಸತಿ ಪ್ರದೇಶಗಳು ಹಾಗೂ ತಾತ್ಕಾಲಿಕ ಸ್ಥಳಗಳಲ್ಲಿ ಕಾನೂನು ಬಾಹಿರ ಗೋಹತ್ಯೆ ನಡೆಯುತ್ತಿರುವ ಬಗ್ಗೆ ಹಿಂದಿನ ವರ್ಷಗಳಲ್ಲಿ ದೂರುಗಳು ಹಾಗೂ ವರದಿಗಳು ಬಂದಿವೆ. ಇಂತಹ ಕೃತ್ಯಗಳಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದರ ಜೊತೆಗೆ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೂ ನೋವು ಉಂಟಾಗುತ್ತದೆ ಎಂದು ಮೋಹನ ಗೌಡ ಹೇಳಿದರು.

ಹಬ್ಬದ ಸಮಯದಲ್ಲಿ ವಿವಿಧ ಕಡೆ ರಸ್ತೆಗಳನ್ನು ಬಂದ್ ಮಾಡಿ ನಮಾಜ್ ಮಾಡುವುದರಿಂದ ಸಾರ್ವಜನಿಕರು ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವವರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.