ಸಚಿವ ನಾಗೇಂದ್ರ ವಜಾಗೆ ಬಿಜೆಪಿ ಪಟ್ಟು: ಕಲಾಪ ಭಂಗ

KannadaprabhaNewsNetwork |  
Published : Aug 18, 2026, 02:00 AM IST
ಸದನ ಕಲಾಪ | Kannada Prabha

ಸಾರಾಂಶ

‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಕಳಂಕಿತ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಲ್ಲಿಯವರೆಗೆ ಅಧಿವೇಶನ ನಡೆಯಲು ಬಿಡುವುದಿಲ್ಲ’ ಎಂದು ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಪಟ್ಟು ಹಿಡಿದಿದ್ದು, ಇಡೀ ದಿನದ ಕಲಾಪ ಗದ್ದಲಕ್ಕೆ ಆಹುತಿಯಾಯಿತು.

ಕನ್ನಡಪ್ರಭ ವಾರ್ತೆ, ವಿಧಾನಮಂಡಲ

‘ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಕಳಂಕಿತ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಲ್ಲಿಯವರೆಗೆ ಅಧಿವೇಶನ ನಡೆಯಲು ಬಿಡುವುದಿಲ್ಲ’ ಎಂದು ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಪಟ್ಟು ಹಿಡಿದಿದ್ದು, ಇಡೀ ದಿನದ ಕಲಾಪ ಗದ್ದಲಕ್ಕೆ ಆಹುತಿಯಾಯಿತು.

ವಿಧಾನಸಭೆಯಲ್ಲಿ ನಾಗೇಂದ್ರ ವಜಾ ಆಗ್ರಹದಿಂದ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಇಡೀ ದಿನ ತೀವ್ರ ಆರೋಪ ಪ್ರತ್ಯಾರೋಪ ನಡೆದಿದ್ದು, ವಿಧಾನಪರಿಷತ್‌ನಲ್ಲೂ ನಾಗೇಂದ್ರ ಗದ್ದಲ ಜೋರು ಪಡೆದಿತ್ತು.

ಉಭಯ ಸದನಗಳಲ್ಲಿ ವಿಪಕ್ಷಗಳ ಸದಸ್ಯರು, ‘ನಾಗೇಂದ್ರ ರಾಜೀನಾಮೆ ಕೊಡಲೇಬೇಕು, ನಾಗೇಂದ್ರ ವಜಾ ಮಾಡಿ, ವಾಲ್ಮೀಕಿ ನಿಗಮವನ್ನು ಕಾಪಾಡಿ’ ಎಂದು ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಸಂಧಾನಸಭೆ ನಡೆದರೂ ಪ್ರಯೋಜನವಾಗಲಿಲ್ಲ.

ಹೀಗಾಗಿ ಅಂತಿಮವಾಗಿ ವಿಧಾನಪರಿಷತ್‌ ಹಾಗೂ ವಿಧಾನಸಭೆಯಲ್ಲಿ ನಾಗೇಂದ್ರ ವಜಾ ಆಗ್ರಹದ ಗದ್ದಲದ ನಡುವೆಯೇ, ‘ಪ್ರಶ್ನೋತ್ತರ, ಶೂನ್ಯವೇಳೆ, ವರದಿ ಮಂಡನೆ, ಖಂಡನಾ ನಿರ್ಣಯ ಅಂಗೀಕಾರ’ ಅಂತಹ ಕಲಾಪ ವ್ಯವಹಾರಗಳನ್ನು ಚರ್ಚೆ ಇಲ್ಲದೆ ಪೂರ್ಣಗೊಳಿಸಲಾಯಿತು. ತನ್ಮೂಲಕ ಇಡೀ ದಿನ ಕಲಾಪದ ಚರ್ಚೆ ಆಹುತಿಯಾಯಿತು.ಭ್ರಷ್ಟಾಚಾರಿಗಳಿಂದ ಉತ್ತರ ಪಡೆಯಬೇಕೆ?- ಬಿಜೆಪಿ:

ವಿಧಾನಸಭೆಯಲ್ಲಿ ಹನೂರು ಶೂಟೌಟ್‌ ಚರ್ಚೆ ಬೆನ್ನಲ್ಲೇ ಸಭಾಧ್ಯಕ್ಷ ಜಿ.ಎಸ್. ಪಾಟೀಲ್‌ ಅವರು, ಪ್ರಶ್ನೋತ್ತರ ಅವಧಿಗೆ ರೂಲಿಂಗ್‌ ನೀಡಿದರು.

ಇದಕ್ಕೆ ಆಕ್ಷೇಪಿಸಿದ ವಿರೋಧಪಕ್ಷದ ನಾಯಕ ಆರ್. ಅಶೋಕ್‌, ಬಿಜೆಪಿ ಸದಸ್ಯ ಸುನಿಲ್‌ಕುಮಾರ್, ‘ಭ್ರಷ್ಟಾಚಾರಿ ಸಚಿವರಿಂದ ಉತ್ತರ ತೆಗೆದುಕೊಳ್ಳಲು ಆಗುವುದಿಲ್ಲ. ಸರ್ಕಾರದ ಹಣ ಲೂಟಿ ಹೊಡೆದ ಸಚಿವನನ್ನು ಇಟ್ಟುಕೊಂಡು ಸದನ ಹೇಗೆ ನಡೆಸುತ್ತೀರಿ? ಅವರನ್ನು ವಜಾಗೊಳಿಸುವವರೆಗೂ ಸದನ ನಡೆಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.‘ಇದೇ ಸದನದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಿದ್ದರಾಮಯ್ಯ ಅವರು ಬಿ. ನಾಗೇಂದ್ರ ರಾಜೀನಾಮೆ ಪಡೆದಿದ್ದರು. 187 ಕೋಟಿ ರು. ಅಕ್ರಮ ಲೂಟಿ ಆಗಿದ್ದು, 85 ಕೋಟಿ ರು. ಎಂದು ಸರ್ಕಾರವೇ ಒಪ್ಪಿಕೊಂಡಿತ್ತು. ಚಾರ್ಜ್‌ಶೀಟ್‌ನಲ್ಲೂ ನಂ.1 ಆರೋಪಿ ಇದ್ದ ವ್ಯಕ್ತಿಯನ್ನು ಹೇಗೆ ಸಚಿವನನ್ನಾಗಿ ಮಾಡುತ್ತೀರಿ‘ ಎಂದು ಕಿಡಿ ಕಾರಿದರು.

ಪ್ರತಿಪಕ್ಷ ಆರ್. ಅಶೋಕ್‌, ‘ಬಿ. ನಾಗೇಂದ್ರ ಹಗರಣದಿಂದ ಒಬ್ಬ ದಲಿತ ಅಧಿಕಾರಿ ಸಾವನ್ನಪ್ಪಿದರು. ಅವರ ಕುಟುಂಬಕ್ಕೆ ಪಿಂಚಣಿ ನೀಡಿಲ್ಲ. ಅವರ ಮಗನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಟ್ಟಿಲ್ಲ. ಆದರೆ ಇವರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದೀರಿ’ ಎಂದು ಟೀಕಿಸಿದರು.

ಗದ್ದಲದ ಮಧ್ಯೆ ಸಚಿವ ಕೃಷ್ಣ ಬೈರೇಗೌಡ ಸದನ ಸಭಾ ನಡಾವಳಿ ಓದುತ್ತಾ, ‘ಸಚಿವರ ಬಗ್ಗೆ ಆರೋಪ ಮಾಡುವುದಾದರೆ ಲಿಖಿತವಾಗಿ ನೋಟಿಸ್‌ ಕೊಟ್ಟು ಚರ್ಚೆ ಮಾಡಲಿ. ನಿಯಮಾವಳಿ ಪ್ರಕಾರ ಸದನ ನಡೆಯಬೇಕು. ಏಕಾಏಕಿ ಆರೋಪ ಮಾಡಲು ಆಗಲ್ಲ’ ಎಂದು ತಿಳಿಸಿದರು.

ಇತ್ತ ವಿಪಕ್ಷ ಶಾಸಕರುಗಳು ಸದನದಲ್ಲಿ ಸಚಿವ ನಾಗೇಂದ್ರ ವಜಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು. ಬಿಜೆಪಿ-ಜೆಡಿಎಸ್ ಸದಸ್ಯರುಗಳು ತಮ್ಮ ಆಸನದ ಮುಂದೆ ನಿಂತು ಘೋಷಣೆ ಕೂಗುತ್ತಾ ರಾಜೀನಾಮೆಗೆ ಪಟ್ಟು ಹಿಡಿದರು. ಈ ವೇಳೆ ವಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು.‌ ಬಳಿಕ ಸ್ಪೀಕರ್ ಸದನವನ್ನು 1.30 ಗಂಟೆವರೆಗೆ ಮುಂದೂಡಿದರು.ಬಳಿಕ ಸಂಜೆ 4 ಗಂಟೆಗೆ ಸೇರಿದ ಸದನದಲ್ಲಿ ಮತ್ತೆ ಬಿಜೆಪಿ ಸದಸ್ಯರು ನಾಗೇಂದ್ರ ರಾಜೀನಾಮೆಗೆ ಪಟ್ಟುಹಿಡಿದರು.

ಆಗ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ನಾಗೇಂದ್ರ ವಿರುದ್ಧ ಆರೋಪವಿದ್ದರೆ ರಾಜ್ಯಪಾಲರೇ ಪ್ರತಿಜ್ಞಾವಧಿ ಬೋಧಿಸುತ್ತಿರಲಿಲ್ಲ ಎಂದು ಸಮರ್ಥನೆ ನೀಡಲು ಯತ್ನಿಸಿದರು. ಕಾಂಗ್ರೆಸ್‌ ಸದಸ್ಯರು 40 ಪರ್ಸೆಂಟ್‌ ಕಮಿಷನ್‌ ಮತ್ತಿತರ ಆರೋಪ ಮಾಡಿದರು. ಇದರಿಂದ ಗದ್ದಲ ಜೋರಾಯಿತು.ಇದರ ನಡುವೆಯೇ ವರದಿ ಮಂಡನೆ, ಪ್ರಶ್ನೋತ್ತರ ಸೇರಿದಂತೆ ಕಲಾಪ ವ್ಯವಹಾರಗಳನ್ನು ಪೂರ್ಣಗೊಳಿಸಿ ಸದನವನ್ನು ಮುಂದೂಡಲಾಯಿತು.

ಪರಿಷತ್ತಿನಲ್ಲೂ ಗದ್ದಲ:

ಪರಿಷತ್‌ನಲ್ಲೂ ಬಿ. ನಾಗೇಂದ್ರ ರಾಜೀನಾಮೆ ಪಡೆಯಬೇಕೆಂದು ಬಲವಾಗಿ ಪಟ್ಟು ಹಿಡಿದು ಬಿಜೆಪಿ ಸದಸ್ಯರು ನಿರಂತರವಾಗಿ ಘೋಷಣೆ ಕೂಗಿದರು. ಇದರ ಸಭಾಪತಿಗಳು ಪ್ರಶ್ನೋತ್ತರ, ಶೂನ್ಯವೇಳೆ, ವರದಿ ಮಂಡನೆ, ಖಂಡನಾ ನಿರ್ಣಯ ಅಂಗೀಕಾರ ಪಡೆದುಕೊಂಡ ಪ್ರಸಂಗ ನಡೆಯಿತು.ಹನೂರು ಶೂಟೌಟ್‌ ಚರ್ಚೆ ಬಳಿಕ ಪ್ರತಿಪಕ್ಷಗಳ ಸದಸ್ಯರು ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿದರು.

ಸಭಾಪತಿ ಸಲೀಂ ಅಹಮದ್‌, ಸಭಾನಾಯಕ ಡಾ. ಯತೀಂದ್ರ, ಸಚಿವರಾದ ಬಸವರಾಜ ರಾಯರೆಡ್ಡಿ ಮುಂತಾದವರು ಪ್ರಶ್ನೋತ್ತರ ಕಲಾಪ ಮುಂದುವರೆಸಲು ಸಾಕಷ್ಟು ಬಾರಿ ಮನವಿ ಮಾಡಿದರಾದರೂ ಪ್ರತಿಪಕ್ಷಗಳ ಸದಸ್ಯರು ಸರ್ಕಾರ, ಸಚಿವ ನಾಗೇಂದ್ರ, ಕಾಂಗ್ರೆಸ್‌ ಪಕ್ಷದ ವಿರುದ್ಧ ಘೋಷಣೆ ಕೂಗತೊಡಗಿದರು.

ಹೀಗಾಗಿ ಸಭಾಪತಿಗಳು ಗದ್ದಲದ ನಡುವೆ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ, ವರದಿ ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರು ಬರೆದರೆ ಬದುಕಿನ ಬಹಳ ದೊಡ್ಡ ಸತ್ಯ ಹೇಳಿದಂತೆ: ಡಾ.ಕೃಷ್ಣಮೂರ್ತಿ ಹನೂರು
ದೇಶಭಕ್ತಿ, ಹಿಂದೂ ಸಂಸ್ಕೃತಿ ರಕ್ಷಣೆ ಸಂಕಲ್ಪ ಮಾಡಿ