ಕನ್ನಡಪ್ರಭ ವಾರ್ತೆ ತುಮಕೂರು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಗಂಭೀರ ಆರೋಪಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಜಿಲ್ಲಾ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದೆ. ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ 30 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ನಾಗೇಂದ್ರ ಅವರಿಗೆ ಸಂಬಂಧಿಸಿದಂತೆ ಸುಮಾರು 1.20 ಕೋಟಿ ರು.ಅಕ್ರಮ ಹಣದ ಲಾಭ ತಲುಪಿರುವ ಆರೋಪವನ್ನು ತನಿಖಾ ಸಂಸ್ಥೆ ದಾಖಲಿಸಿದೆ. ಜೊತೆಗೆ ನಿಗಮದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಂತ ಹಂತವಾಗಿ ವರ್ಗಾಯಿಸಿರುವ ಅಂಶಗಳೂ ತನಿಖೆಯಲ್ಲಿ ಬಹಿರಂಗವಾಗಿವೆ ಎಂದರು.ಇಂತಹ ಗಂಭೀರ ಆರೋಪಗಳು ಮತ್ತು ಸಿಬಿಐ ಆರೋಪ ಪಟ್ಟಿ ನ್ಯಾಯಾಲಯದ ಮುಂದೆ ಇರುವ ಸಂದರ್ಭದಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನೇ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವುದು ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಅತ್ಯಂತ ತಪ್ಪು ಸಂದೇಶವಾಗಿದೆ ಎಂದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನುಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಅತ್ಯಂತ ಗಂಭೀರವಾದದ್ದು.ಈ ಹಣವು ಬಡವರು, ಹಿಂದುಳಿದವರು ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿತ್ತು.ಇಂತಹ ಸಾರ್ವಜನಿಕ ಹಣದ ದುರುಪಯೋಗದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ಪ್ರಜಾಪ್ರಭುತ್ವದ ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಬಿ. ನಾಗೇಂದ್ರಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು.ಇಲ್ಲವಾದರೆ, ಸಾರ್ವಜನಿಕರ ಹಣದ ರಕ್ಷಣೆಗೆ ಮತ್ತು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಹೇಳಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ಜಿಲ್ಲಾ ಕಾರ್ಯದರ್ಶಿ ಕೆ. ವೇದಮೂರ್ತಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ದಿಲೀಪ್, ಉಪಾಧ್ಯಕ್ಷ ವಿಜಯಕುಮಾರ್, ಮುಖಂಡ ಮರಿತಿಮ್ಮಯ್ಯ ಭಾಗವಹಿಸಿದ್ದರು.
--------ಕೋಟ್...