ಎಸ್‌ಐಆರ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾನಗರದಲ್ಲಿ ಎಸ್.ಐ.ಆರ್ ಕಾರ್ಯದಲ್ಲಿನ ಲೋಪಗಳನ್ನು ಸರಿಪಡಿಸಿ, ನಗರದ ಪ್ರಮುಖ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಸ್.ಐ.ಆರ್ ಒಂದು ಮಹತ್ವದ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ಆದರೆ ಕೆಲವರು ಈ ಆಶಯ ಬುಡಮೇಲು ಮಾಡುವ ಷಡ್ಯಂತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜಯಪುರ ಮಹಾನಗರದಲ್ಲಿ ನಡೆಯುತ್ತಿರುವ ಎಸ್.ಐ.ಆರ್ ಕಾರ್ಯ ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ದೂರಿದರು.
ಚುನಾವಣೆ ಆಯೋಗದ ನಿಯಮಗಳ ಪ್ರಕಾರ, ಸರ್ಕಾರದಿಂದ ನೇಮಕವಾಗಿರುವ ಬಿ.ಎಲ್.ಒ ಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಆದರೆ, ನಮ್ಮ ನಗರದಲ್ಲಿ ಬಹಳಷ್ಟು ಬಿ.ಎಲ್.ಓಗಳು ಮನೆಮನೆಗೆ ಭೇಟಿ ನೀಡುತ್ತಿಲ್ಲ. ಬದಲಾಗಿ, ದೇವಸ್ಥಾನ, ಮಸೀದಿಗಳು ಹಾಗೂ ಶಾಲೆಗಳಲ್ಲಿ ಕುಳಿತುಕೊಂಡು ತಮ್ಮಿಷ್ಟದಂತೆ ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಮೇಯರ್ ಎಂ.ಎಸ್. ಕರಡಿ ಮಾತನಾಡಿ, ಈ ಪ್ರಕ್ರಿಯೆ ಸರ್ಮಪಕವಾಗಿ ನಡೆಯದೇ ಹೋದರೆ ಅನೇಕ ತೊಂದರೆ ಉಂಟಾಗುವುದು ಸಹಜ, ಇದರಿಂದಾಗಿ ನೈಜ ಹಾಗೂ ಅರ್ಹ ಮತದಾರರಿಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ, ಮತದಾರರ ಮ್ಯಾಪಿಂಗ್ ಕಾರ್ಯ ಕೂಡ ಸಂಪೂರ್ಣ ಅವೈಜ್ಞಾನಿಕವಾಗಿ ಹಾಗೂ ತಪ್ಪಾಗಿ ನಡೆದಿದೆ ಎಂದು ದೂರಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಮಾತನಾಡಿ, ಬಿ.ಎಲ್.ಓ ಗಳಿಗೆ ಈ ಬಗ್ಗೆ ಸರಿಯಾದ ತರಬೇತಿ ನೀಡದ ಕಾರಣ ಇಂತಹ ಗಂಭೀರ ಲೋಪದೋಷಗಳು ಉಂಟಾಗುತ್ತಿವೆ. ಬಿಎಲ್ ಓಗಳು ಈಗಾಗಲೇ ಸರಕಾರಿ ನೌಕರಿ ಮಾಡುತ್ತಿರುವುದರಿಂದ ಬಿಡುವು ಮಾಡಿಕೊಂಡು ಎಸ್.ಐ.ಆರ್ ಕಾರ್ಯ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೂ ಎಲ್ಲ ಫಾರ್ಮ್‌ಗಳನ್ನು ಹೊತ್ತುಕೊಂಡು ಮನೆಮನೆಗೆ ಹೋಗಲು ಆಗುವುದಿಲ್ಲ. ನಾವಿರುವ ಜಾಗಕ್ಕೇ ಬನ್ನಿ ಎಂದು ಹೇಳುತ್ತಿದ್ದಾರೆ ಎಂದ ಅವರು,. ಈ ಹಿನ್ನೆಲೆಯಲ್ಲಿ ಅವರಿಗೆ ನೆರವಾಗಲು ಅವರಿಗೆ ಸಹಾಯಕ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದರು. ಇಬ್ರಾಹಿಂಪುರ ವಾರ್ಡ ಸಂಖ್ಯೆ 21ರ ಶಾಲೆ ಸಂಖ್ಯೆ 06, ಅಲ್‌ಅಮೀನ್ ಭಾಗದಲ್ಲಿ, 9,11, 14, 31 ಹಾಗೂ 33 ನೇ ವಾರ್ಡ್ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಸರಿಯಾಗಿ ಕಾರ್ಯನಿರ್ವಹಣೆ ಆಗದೇ ಮತದಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ, ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪಾರದರ್ಶಕ ಪ್ರಕ್ರಿಯೆಗಾಗಿ, ತಕ್ಷಣವೇ ವಿಜಯಪುರ ನಗರದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಿ ಎಂಬ ಬೇಡಿಕೆ ಮೊಳಗಿತು. ಮನೆ-ಮನೆಗೆ ತೆರಳಿ ಕಾರ್ಯನಿರ್ವಹಿಸುವಂತೆ ಬಿ.ಎಲ್.ಒ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನ ನೀಡುವಂತೆ ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.