ಶಿರಸಿ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಹಾಗೂ ಹಿಂದೂಪರ ಸಂಘಟನೆಗಳ ವತಿಯಿಂದ ಸಹಾಯಕ ಆಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಮಾತನಾಡಿ, ಸನಾತನ ಧರ್ಮದ ಸಂಸ್ಕೃತಿಯಲ್ಲಿ ಗೋವು ಆಧರಿತ ಕೃಷಿ ಒಂದು ಬಹುಮುಖ್ಯವಾದ ವಿಚಾರವಾಗಿದ್ದು, ಗೋವುಗಳಿಗೆ, ಮನುಷ್ಯರಿಗೆ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ.
ದೇಶದಲ್ಲಿ ಕೃಷಿಯು ಉಳಿದಿದ್ದರೆ ಅದು ಗೋಮಾತೆಯ ಕಾಣಿಕೆ. ಆದರೆ ರಾಜ್ಯದ ಕೋಟ್ಯಂತರ ಜನರ ಭಾವನೆಯೊಂದಿಗೆ ಬೆರೆತಿರುವ ಗೋಮಾತೆಯನ್ನು ಸಂರಕ್ಷಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಅಸಡ್ಡೆಯನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯಾದ್ಯಂತ ಒಟ್ಟು ೧೫ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಿದೆ. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಗೋಶಾಲೆಗಳಿಗೆ ಅನುದಾನ ಕಡಿತಗೊಳಿಸಿ ಅದರ ಮೂಲ ಉದ್ದೇಶಗಳಿಗೆ ತೊಂದರೆ ನೀಡುವ ಮೂಲಕ ಗೋಶಾಲೆಗಳನ್ನು ಮುಚ್ಚಲು ಹೊರಟಿರುವುದು ರಾಜ್ಯದ ಮತದಾರರಿಗೆ ಮಾಡಿದ ಅನ್ಯಾಯವಾಗಿದೆ ಎಂದರು.ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ರಾಜ್ಯದಲ್ಲಿ ಆರಕ್ಷಕರಿಗೆ ಭದ್ರತೆಯಿಲ್ಲ. ಗೋವುಗಳಿಗೆ ರಕ್ಷಣೆಯಿಲ್ಲ. ಗೋಮಾತೆಯ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಬಂಧಿಸಿರುವ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮಾತನಾಡಿ, ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಚಾಮರಾಜ ಪೇಟೆಯಲ್ಲಿ ನಡೆದಿದೆ. ಹಿಂದೂ ಧಾರ್ಮಿಕ ಭಾವನೆಗಳನ್ನು ಹತ್ತಿಕ್ಕುವ ಘಟನೆ ಪದೇ ಪದೇ ನಡೆಯುತ್ತಿದೆ. ಬಂಧಿಸಿದ ಆರೋಪಿಯನ್ನು ಬುದ್ಧಿಮಾಂದ್ಯ ಎಂದು ಬಿಂಬಿಸಲು ಹೊರಟಿದ್ದಾರೆ ಎಂದರು.ವಿಶ್ವ ಹಿಂದೂ ಪರಿಷತ್‌ನ ಪ್ರತಿಭಾ ಭಟ್ಕಳ ಮಾತನಾಡಿ, ಸನಾತನ ಧರ್ಮದಲ್ಲಿ ಗೋವುಗಳಿಗೆ ಬಹಳ ಪ್ರಾಮುಖ್ಯತೆಯಿದ್ದು, ಗೋಮಾತೆಯ ಕೆಚ್ಚಲು ಕೊಯ್ದ ಹೇಡಿಗೆ ತಕ್ಕ ಶಾಸ್ತಿ ಆಗಬೇಕು. ಜಿಹಾದಿ ಮಾನಸಿಕತೆ ಹೊಂದಿರುವ ವ್ಯಕ್ತಿಗಳಿಂದ ಹೀನ ಕೃತ್ಯ ನಡೆಯುತ್ತಿದೆ. ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಜಮೀರ್ ಅಹಮ್ಮದ್ ಖಾನ್ ಬೆಂಬಲಿಗರಿಂದ ಚಾಮರಾಜಪೇಟೆಯಲ್ಲಿ ಹೀನ ಕೃತ್ಯ ನಡೆದಿದ್ದು, ಕರ್ನಾಟಕವು ಔರಂಗಜೇಬನ ಸಾಮ್ರಾಜ್ಯವಾಗಿದೆ. ರಾಜ್ಯದ ಹಿಂದೂಗಳು ಎಚ್ಚೆತ್ತುಕೊಳ್ಳುವ ಅನಿವಾರ್ಯ ಅತ್ಯವಶ್ಯವಾಗಿದೆ ಎಂದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ಪ್ರಮುಖರಾದ ಉಪೇಂದ್ರ ಪೈ, ಆರ್.ವಿ. ಹೆಗಡೆ ಚಿಪಗಿ, ವೀಣಾ ಶೆಟ್ಟಿ, ಗಣಪತಿ ನಾಯ್ಕ, ನಾಗರಾಜ ನಾಯ್ಕ, ರೇಖಾ ಹೆಗಡೆ ಕಂಪ್ಲಿ, ಶ್ರೀಕಾಂತ ಬಳ್ಳಾರಿ, ರವಿ ಚಂದಾವರ, ನಂದನ ಸಾಗರ, ಶ್ರೀಕಾಂತ ನಾಯ್ಕ ಮತ್ತಿತರರು ಇದ್ದರು.