ಶಹಾಪುರ ಬಿಜೆಪಿ ನಾಯಕರುಗಳಿಂದ ಅಶೋಕ್, ವಿಜಯೇಂದ್ರ ಭೇಟಿ
ಶಹಾಪುರದಲ್ಲಿ ದೊಡ್ಡ ಮಟ್ಟದ ಅಕ್ಕಿ ನಾಪತ್ತೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ದೂರಿರುವ ತಾಲೂಕು ಬಿಜೆಪಿ ಮುಖಂಡರುಗಳು, ಇದರ ತನಿಖೆಯನ್ನು ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಸದನದಲ್ಲಿ ಧ್ವನಿ ಎತ್ತಬೇಕೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅಕ್ಕಿ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಕಾಟಾಚಾರಕ್ಕೆ ಎನ್ನುವಂತೆ ತನಿಖೆ ಮಾಡುತ್ತಿದ್ದಾರೆ. ಅಕ್ರಮ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹಾಗೂ ಅವರ ಹಿಂಬಾಲಕರ ಕೈವಾಡವಿದೆ ಎಂದು ಆರೋಪಿಸಿದ ಬಿಜೆಪಿ ನಾಯಕರುಗಳು, ಸಿಐಡಿಗೆ ತನಿಖೆ ವಹಿಸಬೇಕೆಂದು ಆಗ್ರಹಿಸಿದರು.ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ಸ್ವಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿ ನಾಪತ್ತೆ ಪ್ರಕರಣ ನಡೆದಿದೆ. ತನಿಖೆ ನಡೆಸಲಾಗುತ್ತಿದೆ ಎಂದವರು ಹಾರಿಕೆ ರೀತಿಯ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ ಎಂದು ಟೀಕಿಸಿದರು.
ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಗುರು ಕಾಮಾ ಮಾತನಾಡಿ, ಈಗಾಗಲೇ ನಮ್ಮ ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರೂ ಈ ಪ್ರಕರಣವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ, ಬಿಜೆಪಿಯ ನಗರ ಮಂಡಲ ಅಧ್ಯಕ್ಷ ದೇವೇಂದ್ರ ಕೊನೇರ, ತಾಲೂಕು ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ, ಹಿರಿಯ ಮುಖಂಡ ಡಾ. ಚಂದ್ರಶೇಖರ್ ಸುಬೇದಾರ್,ಬಸವರಾಜ ವಿಭೂತಿಹಳ್ಳಿ, ರಾಜಶೇಖರ ಗೂಗಲ್ ಬಸವರಾಜ ಅರುಣಿ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.