ಕನ್ನಡಪ್ರಭ ವಾರ್ತೆ ಬಳ್ಳಾರಿಜಿಲ್ಲೆಯ ಸರ್ಕಾರಿ ಕಚೇರಿ, ವಿವಿಧ ಸಂಘ- ಸಂಸ್ಥೆಗಳಲ್ಲಿ ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಅಂಗವಾಗಿ ನಗರದ ಕೌಲ್‍ಬಜಾರ್‌ನ 1ನೇ ಗೇಟ್ ಹತ್ತಿರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿನ ಪುತ್ಥಳಿಗೆ ಗೌರವನಮನ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಎಎಸ್ಪಿ ರವಿಕುಮಾರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಸಹಾಯಕ ನಿರ್ದೇಶಕಿ ಮಮತಾ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ- ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಬಳ್ಳಾರಿ ವಿವಿಯಲ್ಲಿ ಪರಿನಿರ್ವಾಣ ದಿನ:ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ 67ನೇ ಪರಿನಿರ್ವಾಣ ದಿನ ಆಚರಿಸಲಾಯಿತು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ವಿವಿ ಕುಲಪತಿ ಪ್ರೊ. ಸಾಹೇಬ್ ಅಲಿ ನಿರಗುಡಿ ಅವರು, ದೇಶದ ಭವಿಷ್ಯವನ್ನು ಪ್ರಗತಿಪರ ದೃಷ್ಟಿಕೋನದಿಂದ ನಿರ್ಮಿಸುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.ಭಾರತವು ರಾಜಕೀಯವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮೃದ್ಧಗೊಳ್ಳಬೇಕು ಎಂಬ ಆಶಯ ಹೊತ್ತಿದ್ದ ಅಂಬೇಡ್ಕರ್ ಅವರು ಭವ್ಯ ಭಾರತ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ. ಅನಂತ್ ಎಲ್. ಝಂಡೇಕರ, ಕುಲಸಚಿವ ಎಸ್.ಎನ್. ರುದ್ರೇಶ್, ಹಣಕಾಸು ಅಧಿಕಾರಿ ಪ್ರೊ. ಸದ್ಯೋಜಾಥಪ್ಪ ಮಾತನಾಡಿದರು.ಎಸ್‍ಸಿ- ಎಸ್‍ಟಿ ಘಟಕದ ನಿರ್ದೇಶಕಿ ಪ್ರೊ. ಗೌರಿ ಮಾಣಿಕ ಮಾನಸ್, ಅಣ್ಣೋಜಿ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳಿಂದ ಆಚರಣೆ:ನಗರದ ವಿವಿಧ ದಲಿತ ಸಂಘಟನೆಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿದವು. ದಲಿತ ಸಂಘರ್ಷ ಸಮಿತಿಯ(ಸಾಗರ್ ಬಣ) ರಾಜ್ಯ ಸಂಚಾಲಕ ಎ. ಮಾನಯ್ಯ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ನರಸಪ್ಪ, ಪಂಪಾಪತಿ ಕುಡಿತಿನಿ, ದಲಿತ ಸಂಘರ್ಷ ಸಮಿತಿಯ(ಕೃಷ್ಣಪ್ಪ ಬಣ) ಮುಂಡ್ರಗಿ ನಾಗರಾಜ್, ಪಿ. ಜಗದೀಶ್ವರ ರೆಡ್ಡಿ, ಜಿ. ಗೋವರ್ಧನ, ಈರಣ್ಣ ಹೆಗಡೆ, ಸಣ್ಣ ನಾಗರಾಜ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ, ಎಚ್. ಈಶ್ವರಪ್ಪ, ಸಿ. ಸೋಮಶೇಖರ್ ಮತ್ತಿತರರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವನಮನ ಸಲ್ಲಿಸಿದರು.
ಇಲ್ಲಿನ ಜಿಲ್ಲಾ ಅಂಬೇಡ್ಕರ್ ಸಂಘದ ಕಚೇರಿಯಲ್ಲಿ ಜರುಗಿದ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಿ.ಕೆ. ಅನಂತಕುಮಾರ್, ಎನ್.ಡಿ. ವೆಂಕಮ್ಮ, ಭೀಮದಾಸ್, ನೀಲಕಂಠ ಮತ್ತಿತರರು ಭಾಗವಹಿಸಿದ್ದರು.