ನರಗುಂದ: ಆಡಂಬರದ ಭಕ್ತಿಗೆ ಭಗವಂತ ಒಲಿಯುವುದಿಲ್ಲ. ಭಗವಂತನ ಕುರಿತು ಯಾರಲ್ಲಿ ಭಕ್ತಿ-ಭಾವ ಶ್ರದ್ಧೆ ಇರುತ್ತದೆಯೋ ಅಲ್ಲಿ ಭಗವಂತ ಇದ್ದೆ ಇರುತ್ತಾನೆ. ಶುದ್ಧವಾದ ಮನಸ್ಸಿನಲ್ಲಿ ಭಗವಂತ ಇರುತ್ತಾನೆ. ಧ್ಯಾನ, ತಪ ನಿರಂತರ ಮಾಡುತ್ತಿರಬೇಕು ಎಂದು ಕೊಣ್ಣೂರ ವಿರಕ್ತಮಠದ ಡಾ. ಚನ್ನವೀರ ಶ್ರೀಗಳು ಹೇಳಿದರು.

ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ಗುರುದ್ವಯರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಮಾತನಾಡಿದರು. ವಿದ್ಯಾವಂತ ದಂಪತಿ ಕುಟುಂಬಗಳಲ್ಲಿ ವಿವಾಹ ವಿಚ್ಛೇದನಗಳು ಹೆಚ್ಚು ಕಂಡುಬರುತ್ತಿವೆ. ಕಾರಣ ಆಧ್ಯಾತ್ಮಿಕದ ಕಡೆ ಅವರ ಚಿತ್ತ ಇಲ್ಲದಿರುವುದೇ ವಿಘ್ನಗಳಿಗೆ ಕಾರಣ. ಡ್ಯಾನ್ಸ್, ಸಿನಿಮಾ ಮನರಂಜನೆ ಎಲ್ಲಿರುತ್ತದೆಯೋ ಅಲ್ಲಿ ಕರೆಯದೇ ಇದ್ದರೂ ಜನ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ, ಆಧ್ಯಾತ್ಮಿಕ ವಿಚಾರಗಳನ್ನು ಹೇಳುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನ ಸೇರುವುದು ವಿರಳವಾಗುತ್ತಿರುವುದು ಅನೇಕ ಅವಾಂತರಗಳಿಗೆ ಕಾರಣವಾಗಿದೆ ಎಂದು ಹೇಳಿದರು.ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜಾತ್ರಾ ಪ್ರವಚನ ಪ್ರಾರಂಭ ಮೊದಲು ದೇವಿ ಪಾರಾಯಣ ನಡೆದದ್ದು ಎಲ್ಲರಿಗೂ ಶಕ್ತಿ ನೀಡಿದಂತಾಗಿದೆ. ಸಕಲ ಭಕ್ತಾದಿಗಳು ತಮ್ಮ ಮಕ್ಕಳನ್ನು ಪ್ರವಚನ ಕೇಳಲಿಕ್ಕೆ ಪ್ರತಿನಿತ್ಯ ಸಂಜೆ 6.30ಕ್ಕೆ ಕಡ್ಡಾಯ ಕರೆದುಕೊಂಡು ಬರಬೇಕು. ಈಗಿನ ದಿನಮಾನಗಳಲ್ಲಿ ಮಕ್ಕಳಿಗೆ ಸಂಸ್ಕಾರದ ಅವಶ್ಯಕತೆ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ದುರ್ಗಾಶಕ್ತಿ ಸಪ್ತಶತೀ ಋಷಿಪ್ರಜ್ಞಾ ಆಂದೋಲನ ಬಳಗದಿಂದ 45 ನಿಮಿಷಗಳ ಕಾಲ ಲೋಕಹಿತವನ್ನು ಬಯಸಿದ ಯಾದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ ಪುಸ್ತಕದ ಅಧ್ಯಯನ ನಡೆಯಿತು. ಈ ಸಮಯದಲ್ಲಿ ವಾತಾವರಣ ಸಂಪೂರ್ಣ ಸ್ತಬ್ಧವಾಗಿತ್ತು. ದಾಸೋಹ ಸೇವೆ ಸಲ್ಲಿಸಿದ ಭಕ್ತಾದಿಗಳಿಗೆ ವೇದಿಕೆಯಲ್ಲಿ ಶ್ರೀಗಳಿಂದ ವಸ್ತ್ರ, ರುದ್ರಾಕ್ಷಿ ಮತ್ತು ಸಿದ್ಧೇಶ್ವರನ ಭಾವಚಿತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಪಂಚಪ್ಪ ಬೆಳವಟಿಗಿ, ಎಂ.ಎಸ್. ಕುಸುಗಲ್ಲ, ಪವಾಡೆಪ್ಪ ವಡ್ಡಿಗೇರಿ, ಎಸ್.ವಿ. ಅಲಮಯ್ಯನವರ, ಶರಣಗೌಡ ಪೋಲಿಸಪಾಟೀಲ ಸೇರಿದಂತೆ ಅನೇಕರಿದ್ದರು. ಶ್ವೇತಾ ಬೂಸಪ್ಪನವರ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ನಿರೂಪಿಸಿದರು.