ಗದಗ: ಜಿಲ್ಲೆಯಲ್ಲಿ ಆಧಾರ್ ಸೀಡಿಂಗ್ ಕಾರ್ಯ ಶೇ. 85.62ರಷ್ಟು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಶೇ. 100 ಸಾಧಿಸಲು ಕ್ರಮ ಕೈಗೊಳ್ಳಬೇಕು. ಮೃತರ ಹೆಸರಿನಲ್ಲಿರುವ ಜಮೀನುಗಳಿಗೆ ವಿಮೆ ಹಾಗೂ ಪರಿಹಾರ ನೀಡುವ ಸಂದರ್ಭದಲ್ಲಿ ದಾಖಲೆಗಳು ಸರಿಯಾಗಿರುವಂತೆ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು.ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್ಲೋಡ್ ಕಾರ್ಯ ಶೇ. 48ರಷ್ಟೇ ಪೂರ್ಣಗೊಂಡಿದೆ. ಇದನ್ನು ಇನ್ನಷ್ಟು ವೇಗಗೊಳಿಸಬೇಕು. ಪೌತಿ ಕಾರ್ಯ, ಭೂ ಸುರಕ್ಷಾ ಯೋಜನೆ, ಲ್ಯಾಂಡ್ ಬೀಟ್, ಜಮಾಬಂದಿ, ಹಿಡುವಳಿ ಜಮೀನು ಪೋಡಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಉತಾರ ಸೇರಿ ಎಲ್ಲ ದಾಖಲೆಗಳು ನಾಗರಿಕರಿಗೆ ಸುಲಭವಾಗಿ ಲಭ್ಯವಾಗುವ ವ್ಯವಸ್ಥೆ ಮಾಡಬೇಕು ಹಾಗೂ ಕಂದಾಯ ಗ್ರಾಮಗಳ ಪ್ರಸ್ತಾವನೆ ಸಲ್ಲಿಕೆಗೆ ಮಾರ್ಚ್ 16 ಕೊನೆಯ ದಿನವಾಗಿದ್ದು, ಅದರೊಳಗೆ ಎಲ್ಲ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳ್ಳಬೇಕು ಮತ್ತು ಈ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಮುಂದಿನ ವರ್ಷದಿಂದ ಜಮಾಬಂಧಿ ಕಾರ್ಯವೂ ಆನ್ಲೈನ್ ಮೂಲಕ ನಡೆಯಲಿದ್ದು, ಇದಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ವ ಸಿದ್ಧತೆ ಕೈಗೊಳ್ಳಬೇಕು. ಈ ಕಾರ್ಯವನ್ನು ಸಂಪೂರ್ಣ ಕಾಗದ ರಹಿತಗೊಳಿಸುವುದು ಸರ್ಕಾರದ ಬದ್ಧತೆ. ಇನ್ಮುಂದೆ ಸರ್ವೇ ಸ್ಕೆಚ್‌ಗಳು ಡಿಜಿಟಲ್ ರೂಪದಲ್ಲೇ ಇರಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲಿ ಜನರಿಗೆ ಸರಿಯಾಗಿ ಲಭ್ಯವಾಗಬೇಕು. ಈಗಾಗಲೇ ಅವರಿಗೆ ಪ್ರತ್ಯೇಕ ಕಚೇರಿಗಳನ್ನು ಗುರುತಿಸಿ ನೀಡಲಾಗಿದೆ. ಆದರೂ ಗ್ರಾಮ ಲೆಕ್ಕಾಧಿಕಾರಿಗಳು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಇಂತಹ ಪರಿಸ್ಥಿತಿ ಮರುಕಳಿಸದಂತೆ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ರಾಜ್ಯದ 43 ಇಲಾಖೆಗಳಲ್ಲಿ ಕೇವಲ 3-4 ಇಲಾಖೆಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬ ವರದಿಯಲ್ಲಿ ಕಂದಾಯ ಇಲಾಖೆಯೂ ಇದೆ. ಕಂದಾಯ ಸಚಿವರ ಕ್ರಿಯಾಶೀಲ ಕಾರ್ಯದಿಂದ ಇದು ಸಾಧ್ಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಪೂರಕವಾಗಿ ಕಂದಾಯ ಇಲಾಖೆಯ ಡಿಜಿಟಲೀಕರಣ ಉತ್ತಮ ಹೆಜ್ಜೆಯಾಗಿದ್ದು ಅಭಿನಂದನೀಯ ಎಂದರು.


ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಸಭೆಗೆ ಅಂಕಿ-ಅಂಶಗಳೊಂದಿಗೆ ಪ್ರಗತಿ ವಿವರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಡಿಡಿಎಲ್ಆರ್ ರುದ್ರಣ್ಣಗೌಡ ಜಿ.ಜೆ., ಎಸಿ ಗಂಗಪ್ಪ ಎಂ., ತಾಲೂಕು ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.