ಕನ್ನಡಪ್ರಭ ವಾರ್ತೆ ಶಿವಮೊಗ್ಗ೧೫ ವರ್ಷಗಳಕ್ಕೂ ಮೇಲ್ಪಟ್ಟು ಸರ್ಕಾರದ ಗೋಮಾಳದ ಜಾಗದಲ್ಲಿ ಕೃಷಿ ಮಾಡುತ್ತಿರುವ ಎಲ್ಲ ರೈತರಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಕೃಷಿ ಸಚಿವ ಕೃಷ್ಣಭೈರೆಗೌಡರಿಗೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ ಮೋರ್ಚಾ ಮುಖಂಡರು ಕಳೆದ 20-30 ವರ್ಷಗಳಿಂದ ಸರ್ಕಾರಿ ಜಾಗವಾದ ಗೋಮಾಳಗಳಲ್ಲಿ ಸಾಗುವಳಿ ಮಾಡಿ ಕೊಂಡು ಬರುತ್ತಿರುವ ಹಾಗೂ ತೋಟಗಳನ್ನು ಕಟ್ಟಿಕೊಂಡಿರುವ ಮಲೆನಾಡಿನ ರೈತರಿಗೆ ಇಂದಿಗೂ ಸಹ ಸಾಗುವಳಿ ಪತ್ರ ಸಿಕ್ಕಿಲ್ಲ. ಇವರಿಗೆ ತಕ್ಷಣವೇ ನಮೂನೆ 57 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಹಿಂದೆ 15 ವರ್ಷಕ್ಕೂ ಮೇಲ್ಪಟ್ಟು ಉಳುಮೆ ಮಾಡುತ್ತಿರುವವರಿಗೆ ಮಾತ್ರ ಸಕ್ರಮಕ್ಕೆ ಅವಕಾಶವಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಅರ್ಜಿಯನ್ನು ತಂತ್ರಜ್ಞಾನ ಬಳಸಿ ವಿಲೇವಾರಿ ಮಾಡುವುದಾಗಿಯೂ ಕೂಡ ಸರ್ಕಾರ ತಿಳಿಸಿ ಅವಕಾಶ ಕೂಡ ನೀಡಲಾಗಿತ್ತು. ಆದರೆ ಆಗ ಚುನಾವಣೆಗಳು ಹಾಗೂ ನೀತಿ ಸಂಹಿತೆಗಳು ಜಾರಿಯಲ್ಲಿ ಇದ್ದುದರಿಂದ ಸಕಾಲಕ್ಕೆ ಅಧಿಕಾರಿಗಳು ಲಭ್ಯವಿರಲಿಲ್ಲ. ಜೊತೆಗೆ ಕಂಪ್ಯೂಟರ್ ಸರ್ವರ್‌ನ ನಿರಂತರ ಸಮಸ್ಯೆ ಇದ್ದು, ರೈತರಿಗೆ ಅರ್ಜಿ ಹಾಕಲು ಆಗಿರಲಿಲ್ಲ. ಹೀಗಾಗಿ ಈಗ 15 ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ನಮೂನೆ 57 ರಲ್ಲಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಸಾಗುವಳಿ ಪತ್ರವನ್ನು ಮಾಡಿಕೊಡ ಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ರಾಜ್ಯ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಡಾ.ನವೀನ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿನ್ಸೆಂಟ್ ರೋಡ್ರಿಗಸ್, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯ್ಡು, ಗಣೇಶ್ ಬಿಳಿಕಿ ಆನಂದ್ ಇತರರು ಹಾಜರಿದ್ದರು.